

Coolie Release: ತಮಿಳು ಚಿತ್ರರಂಗದ ಸೂಪರ್ಸ್ಟಾರ್, ಅಭಿಮಾನಿಗಳ ನೆಚ್ಚಿನ 'ತಲೈವಾ' ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕೂಲಿ’ ಚಿತ್ರದ ಕ್ರೇಜ್ ಇದೀಗ ದುಪ್ಪಟ್ಟಾಗಿದೆ. ಇದೇ ಆ.14ರಂದು ತೆರೆ ಕಾಣಲಿರುವ ಸಿನಿಮಾಗೆ ಮುಂಗಡ ಬುಕ್ಕಿಂಗ್ಗಳು ಬಲು ಜೋರಾಗಿದ್ದು, ಜಾಗತಿಕವಾಗಿ ರಿಲೀಸ್ ಆಗಲಿರುವ ರಜಿನಿ ಚಿತ್ರಕ್ಕೆ ಸದ್ಯ ಫ್ಯಾನ್ಸ್ಗಳಲ್ಲಿ ತೀವ್ರ ಕುತೂಹಲ ಕೆರಳಿದೆ.
ಇತ್ತೀಚೆಗಷ್ಟೇ ಚಿತ್ರದ ‘ಮೋನಿಕಾ’ ಹಾಡು ಸೂಪರ್ ಹಿಟ್ ಆಗಿದ್ದು, ಯೂಟ್ಯೂಬ್ನಲ್ಲಿ ಸಖತ್ ಟ್ರೆಂಡ್ ಕೂಡ ಆಗಿದೆ. ಈ ಹಾಡಿನಲ್ಲಿ ಸೌತ್ ಬ್ಯೂಟಿ ಪೂಜಾ ಹೆಗ್ಡೆ ಕಾಣಿಸಿಕೊಂಡಿರುವುದು ನೋಡುಗರ ಮನಗೆದ್ದಿದ್ದು, ಹಾಡಿನ ಜೊತೆಗೆ ರಜಿನಿಕಾಂತ್ ಅವರ ನಟನೆ ಕುಣ್ತುಂಬಿಕೊಳ್ಳುವ ತವಕ ಸಿನಿಪ್ರಿಯರಲ್ಲಿ ಹೆಚ್ಚಿದೆ. ಮೊದಲ ದಿನ ಮೊದಲ ಶೋ ನೋಡಲು ಉತ್ಸುಕರಾಗಿರುವ ಫ್ಯಾನ್ಸ್ಗಳು ತಮ್ಮ ಕೆಲಸವನ್ನು ಬದಿಗಿಟ್ಟು, ಚಿತ್ರ ನೋಡಲು ಒಂದು ದಿನ ರಜೆಗೆ ಮುಂದಾಗಿದ್ದಾರೆ. ಕೆಲವರಿಗೆ ರಜೆ ಸಿಕ್ಕರೆ, ಬಹುತೇಕರಿಗೆ ಅದು ಸಾಧ್ಯವಾಗಿಲ್ಲ. ಆದ್ರೆ, ಇಲ್ಲೊಂದು ಕಂಪನಿ ತನ್ನ ಉದ್ಯೋಗಿಗಳಿಗೆ ಕೂಲಿ ನೋಡಲೆಂದೇ ರಜೆಯನ್ನು ಕೊಟ್ಟಿದೆ.
ಈ ವಿಚಾರ ಜಾಲತಾಣಗಳಲ್ಲಿ ಹರಿದಾಡಿದ್ದು, ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಆಗಸ್ಟ್ 14ರಂದು ಕೂಲಿ ಬಿಡುಗಡೆಯಾಗುತ್ತಿರುವ ಹಿನ್ನೆಲೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ರಜೆಯನ್ನು ಘೋಷಿಸಿದೆ. ರಜಿನಿಕಾಂತ್ ಅವರ ಚಿತ್ರವನ್ನು ನೋಡುವ ಹಪಾಹಪಿಯಲ್ಲಿರುವ ಉದ್ಯೋಗಿಗಳು ಖುಷಿಯಿಂದ ಸಿನಿಮಾ ನೋಡಿ ಬರಲಿ ಎಂಬುದು 'ಯುನೊ ಅಕ್ವಾ ಕೇರ್' ಎಂಬ ಸಂಸ್ಥೆಯ ನಿರ್ಧಾರವಾಗಿದೆ. ಇದು ಕೇವಲ ತಮಿಳುನಾಡಿಗೆ ಮಾತ್ರವಲ್ಲ! ಬೆಂಗಳೂರು, ತಿರುಚ್ಚಿ, ತಿರುನಲ್ವೇಲಿ, ಚೆಂಗಲ್ಪಟ್ಟು, ಮಟ್ಟುತಾವಣಿ ಮತ್ತು ಅರಪಾಲಯಂ ಸೇರಿದಂತೆ ತನ್ನೆಲ್ಲಾ ಶಾಖೆಗಳಿಗೂ ಕಂಪನಿ ರಜೆ ಘೋಷಿಸಿದೆ.
ಮುಂಗಡ ಬುಕಿಂಗ್‌ಗಳು ಈಗಾಗಲೇ ತೆರೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ಗಳು ಸೇಲ್ ಆಗುತ್ತಿವೆ. ಸೋಕ್ನಿಲ್ಕ್ ಪ್ರಕಾರ, ಚಿತ್ರವು ದೇಶಿಯವಾಗಿ ಇಲ್ಲಿಯವರೆಗೆ ಮುಂಗಡ ಟಿಕೆಟ್ ಮಾರಾಟದಲ್ಲಿ 5.55 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ವಿದೇಶಗಳಲ್ಲಿ, ಚಿತ್ರದ ಮೊದಲ ದಿನದ ಮುಂಗಡ ಮಾರಾಟವು ಈಗಾಗಲೇ 37 ಕೋಟಿ ರೂ.ಗಳನ್ನು ದಾಟಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲಿ 'ಕೂಲಿ' ಅತಿದೊಡ್ಡ ಆರಂಭಿಕ ದಿನದ ಕಲೆಕ್ಷನ್‌ಗಳಲ್ಲಿ ಒಂದಾಗಲಿದೆ ಎಂದು ಉದ್ಯಮ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ,(ಏಜೆನ್ಸೀಸ್).