ಅಗ್ರಿಗೋಲ್ಡ್ ನಿರ್ದೇಶಕರ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಗೃಹಸಚಿವ

basavaraj bommai
Published on

ಬೆಂಗಳೂರು: ಅಗ್ರಿಗೋಲ್ಡ್ ಹಗರಣದಲ್ಲಿ ಠೇವಣಿದಾರರಿಗೆ ಹಣ ವಾಪಸ್ ಕೊಡಿಸಲು ಆ ಸಂಸ್ಥೆಯ ನಿರ್ದೇಶಕರ ಆಸ್ತಿಗಳನ್ನು ಜಪ್ತಿ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿ, ಅಗ್ರಿಗೋಲ್ಡ್ ಸಂಸ್ಥೆ ಸಾರ್ವಜನಿಕರಿಂದ ಏಜೆಂಟರ ಮೂಲಕ ಠೇವಣಿ ಸಂಗ್ರಹ ಮಾಡಿ ಲಾಭಾಂಶ ಅಥವಾ ಬಡ್ಡಿ ಕೊಟ್ಟಿಲ್ಲ. ನೂರಾರು ಠೇವಣಿದಾರರು ಈಗಲೂ ಅಲೆದಾಡುತ್ತಿದ್ದಾರೆ. ಸಿಐಡಿ ತನಿಖೆ ನಡೆಯುತ್ತಿದೆ. 1500 ಕೋಟಿ ರೂ. ಠೇವಣಿಯನ್ನು ವೈಯಕ್ತಿಕವಾಗಿ ಬಳಸಿ ದುರ್ಬಳಕೆ ಮಾಡಿದ್ದಾರೆ ಎಂದರು. ಈ ಮುನ್ನ ಪ್ರಕರಣದ ಬಗ್ಗೆ ವಿವರಿಸಿದ ಶಾಸಕ ಬಳ್ಳಾರಿ, 2014-15ರಲ್ಲಿ ಅಗ್ರಿಗೋಲ್ಡ್ ಹಗರಣ ನಡೆದಿದೆ.

84,616 ಮಂದಿ ಠೇವಣಿ ಇಟ್ಟಿದ್ದಾರೆ. ಅಗ್ರಿಗೋಲ್ಡ್ ಮಾಲೀಕರು ಆಂಧ್ರಪ್ರದೇಶ, ತೆಲಂಗಾಣದಲ್ಲಿ 16 ಸಾವಿರ ಎಕರೆಗೂ ಹೆಚ್ಚಿನ ಭೂಮಿ ಹೊಂದಿದ್ದಾರೆ. ಬೆಂಗಳೂರಿನಲ್ಲೇ 250 ಎಕರೆ ಭೂಮಿ ಅವರ ಹೆಸರಿನಲ್ಲಿದೆ. ಈ ಆಸ್ತಿ ಮುಟ್ಟುಗೋಲು ಹಾಕಿ ಠೇವಣಿದಾರರಿಗೆ ನಷ್ಟದ ಪರಿಹಾರ ಕೊಡಿಸುವ ಕೆಲಸ ನಡೆದಿಲ್ಲ ಎಂದರು. ಠೇವಣಿ ಸಂಗ್ರಹಿಸಲು ಕೆಲಸ ಮಾಡಿದ 170 ಸಿಬ್ಬಂದಿ ಪರದಾಡುತ್ತಿದ್ದಾರೆ. ಕೆಲ ಏಜೆಂಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net