

ನವದೆಹಲಿ: ಪ್ರೀತಿಗೆ ವಯಸ್ಸಿಲ್ಲ. ಈ ವಾಕ್ಯಕ್ಕೆ ವೃದ್ಧ ದಂಪತಿ ನಿಜವಾದ ಅರ್ಥ ಬರೆದಿದ್ದಾರೆ. ಪತಿ ಆಸ್ಪತ್ರೆಯಿಂದ ವಂತವಾಗಿ ಮರಳಿ ಬಂದ ಖುಷಿಯಲ್ಲಿ ಪತ್ನಿ ನೃತ್ಯ ಮಾಡಿರುವ ವಿಡಿಯೋ ಇದೀಗ ನೆಟ್ಟಿಗರ ಮನಸ್ಸನ್ನು ಕದ್ದಿದೆ.
ನಿವೃತ್ತ ವಿಂಗ್ ಕಮಾಂಡರ್ ಆಗಿರುವ ಅವಿನಾಶ್ ದಿವಾನ್ 10 ದಿನಗಳ ಕಾಲ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಲ್ಲಿ ಗುಣಮುಖರಾಗಿ ಮನೆಗೆ ಮರಳಿದ ಅವರಿಗೆ ಅವರ ಪತ್ನಿ ರಾಜ್ಕಮಲ್ ದಿವಾನ್ ವಿಶೇಷ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ.
ಮನೆಯ ಕೋಣೆಯ ಹಾಸಿಗೆ ಮೇಲೆ ತನ್ನ ಪತಿಯನ್ನು ಕೂರಿಸಿ, 1998ರಲ್ಲಿ ಬಿಡುಗಡೆಗೊಂಡ ಜಖ್ಮ್ ಚಿತ್ರದ ಗಲಿ ಮೇ ಆಜ್ ಚಾಂದ್ ನಿಕ್ಲಾ ಹಾಡಿಗೆ ನೃತ್ಯ ಮಾಡಿದ್ದಾರೆ. ಇಳಿ ವಯಸ್ಸಿನಲ್ಲಿ ಸುಂದರ ಹಾಡಿಗೆ ಹೆಜ್ಜೆ ಹಾಕುವುದರ ಜತೆ ತಾವೂ ಹಾಡನ್ನು ಹಾಡಿದ್ದಾರೆ. ಪ್ರೀತಿಯ ಪತ್ನಿ ತನಗೋಸ್ಕರ ನೃತ್ಯ ಮಾಡುವುದನ್ನು ಕಾಣುತ್ತಾ ಕುಳಿತ ಅವಿನಾಶ್ ದಿವಾನ್ ಕುಳಿತಲ್ಲೇ ತಾವೂ ಸಹ ಹಾಡಿಗೆ ಕೈಗಳಲ್ಲೇ ನೃತ್ಯ ಮಾಡಿದ್ದಾರೆ. ತನ್ನ ಗಂಡ ಆಸ್ಪತ್ರೆಯಿಂದ ಮರಳಿದ್ದಕ್ಕೆ ಹೇಗೆ ಸಂತಸ ವ್ಯಕ್ತ ಪಡಿಸಬೇಕು ಎನ್ನುವುದೇ ನನಗೆ ತಿಳಿಯಲಿಲ್ಲ. ನನಗಾಗಿದ್ದ ಸಂತಸಕ್ಕೆ ನಾನು ನೃತ್ಯ ಮಾಡಿದೆ ಎಂದು ರಾಜ್ಕಮಲ್ ಹೇಳಿಕೊಂಡಿದ್ದಾರೆ.
ಅವಿನಾಶ್ ಮತ್ತು ರಾಜ್ಕಮಲ್ ದಾಂಪತ್ಯ ಜೀವನವನ್ನು ಆರಂಭಿಸಿ 46 ವರ್ಷಗಳು ಕಳೆದಿವೆ. ಅವಿನಾಶ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರೆ, ಆತನ ಪತ್ನಿ 60 ವರ್ಷ ವಯಸ್ಸಿನವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ದಂಪತಿಯ ವಿಡಿಯೋ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದ್ದು ಇವರ ಪ್ರೀತಿಗೆ ಜನ ಮನಸೋತಿದ್ದಾರೆ. ಪ್ರೀತಿಸಿದರೆ ಇವರಂತೆ ಪ್ರೀತಿಸಬೇಕು ಎಂದು ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್)