ಯರಿಯೂರಿನಲ್ಲಿ ಅಂಬೇಡ್ಕರ್ ಜಯಂತಿ ಅದ್ದೂರಿ

1 Min Read
ಯರಿಯೂರಿನಲ್ಲಿ ಅಂಬೇಡ್ಕರ್ ಜಯಂತಿ ಅದ್ದೂರಿ

ಯಳಂದೂರು: ತಾಲೂಕಿನ ಯರಿಯೂರು ಗ್ರಾಮದಲ್ಲಿ ಡಾ.ಅಂಬೇಡ್ಕರ್ ಯುವಕರ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ಭಾನುವಾರ ಡಾ.ಅಂಬೇಡ್ಕರ್ ಅವರ 133 ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಇದರ ನಿಮಿತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಹೂಗಳಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಡೊಳ್ಳು, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾತಂಡಗಳ ಸದಸ್ಯರು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದರು. ಅಲ್ಲದೆ ಹೆಣ್ಣು ಮಕ್ಕಳು ಸೇರಿದಂತೆ ಯುವಕರ ತಂಡ ರಸ್ತೆಯಲ್ಲಿ ದೇವರ ಕುಣಿತವನ್ನು ಮಾಡಿ, ಪಟಾಕಿ ಸಿಡಿಸುವ ಮೂಲಕ ಗಮನ ಸೆಳೆದರು.

ಮಧ್ಯಾಹ್ನದ ವೇಳೆ ಗ್ರಾಮದ ಡಾ.ಅಂಬೇಡ್ಕರ್ ಸಮುದಾಯ ಭವನದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ರಂಗೋಲಿ, ಪ್ರಬಂಧ, ಚರ್ಚಾ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ಗ್ರಾಮಸ್ಥರು ಮೈದಾನದಲ್ಲಿ ಒಟ್ಟಿಗೆ ಕುಳಿತು ಹೋಳಿಗೆ ಊಟವನ್ನು ಸವಿದರು.

ಇದಕ್ಕಾಗಿ ಗ್ರಾಮವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಯುವಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.


See also  ಜಾನುವಾರು ಸಂರಕ್ಷಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ
Share This Article