ಬದುಕು ಖುಷಿಯಾಗಿಸಿದ ಕೃಷಿ, ಗಾಣದೆಣ್ಣೆ

ಬದುಕು ಖುಷಿಯಾಗಿಸಿದ ಕೃಷಿ, ಗಾಣದೆಣ್ಣೆ
Published on

ಎಂ.ಎಸ್.ರವಿಕುಮಾರ್ ಕೆ.ಆರ್.ನಗರ
ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಪ್ರಗತಿಪರ ರೈತರಾಗಿ ಅಡಗನಹಳ್ಳಿಯ ಎಚ್.ಆರ್.ನವೀನ್‌ಕುಮಾರ್ ಹೊರಹೊಮ್ಮಿದ್ದಾರೆ.
ಕಾರ್ಪೊರೇಟ್ ಕಂಪನಿಯ ಉದ್ಯೋಗ ಬಿಟ್ಟು ಹಳ್ಳಿಗೆ ಮರಳಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಹಾಗೂ ಕೃಷಿ ಮಾಡಬೇಕು ಎಂಬ ಹಂಬಲದಿಂದ ಎತ್ತಿನ ಗಾಣಗಳನ್ನು ಸ್ಥಾಪಿಸಿ ಎಣ್ಣೆ ತೆಗೆದು ಮಾರಾಟ ಮಾಡುವ ಜತೆಗೆ ಸಾವಯವ ಕೃಷಿಯೊಂದಿಗೆ ಮಿಶ್ರ ತೋಟಗಾರಿಕೆ ಪದ್ಧತಿಯನ್ನು ಅನುಸರಿಸಿ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ.

ಮೂಲತಃ ಹೊಳೆನರಸಿಪುರದವರಾದ ಇವರು ಕೆ.ಆರ್.ನಗರದಲ್ಲಿ ತಂದೆಗೆ ಉದ್ಯೋಗ ಇದ್ದುದ್ದರಿಂದ ಇಲ್ಲಿಗೆ ಬಂದು ನೆಲೆಸಿದ್ದಾರೆ. ಎಚ್.ಆರ್.ನವೀನ್‌ಕುಮಾರ್ ಡಿಪ್ಲೊಮಾ, ಬಿಇ, ಎಂಬಿಎ ಪದವೀಧರರಾಗಿದ್ದು 14 ವರ್ಷಗಳ ಕಾಲ ಬೆಂಗಳೂರಿನ ವಿವಿಧ ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಿಯಾಗಿ ಕೈತುಂಬಾ ಸಂಬಳ ಗಳಿಸುತ್ತಿದ್ದರು. ನಮ್ಮೂರಿನಲ್ಲೇ ಕೃಷಿ ಮಾಡಬೇಕು ಎಂಬ ಹಂಬಲದಿಂದ ತಾಲೂಕಿನ ಅಡಗನಹಳ್ಳಿ ಗ್ರಾಮದಲ್ಲಿ 2014ರಲ್ಲಿ 2 ಎಕರೆ ಜಮೀನು ಖರೀದಿಸಿ ಕೃಷಿ ಶುರು ಮಾಡಿದರು.

ಮೊದಲಿಗೆ ಬೆಂಗಳೂರಿನ ಸ್ನೇಹಿತ ಯೋಗೇಶ್, ಚಾಮರಾಜನಗರದ ಮಹೇಶ್ ಪಾಲುದಾರಿಕೆಯೊಂದಿಗೆ 2017ರಲ್ಲಿ ಗಾಣದ ಉದ್ಯಮಕ್ಕೆ ಕೈ ಹಾಕಿದರು. ಸಾಂಪ್ರದಾಯಿಕ ಪದ್ಧತಿಯಲ್ಲಿ ಎತ್ತಿನ ಗಾಣದ ಮೂಲಕ ಎಣ್ಣೆ ತೆಗೆಯುವ ‘ದೇ ಸಿರಿ ನ್ಯಾಚುರಲ್ ಎತ್ತಿನ ಗಾಣದ ಗುಡಿ ಕೈಗಾರಿಕೆ’ ಪ್ರಾರಂಭಿಸಿದರು. ಪ್ರಸ್ತುತ ಇದೇ ಉದ್ಯಮದಲ್ಲಿ ಎತ್ತರಕ್ಕೆ ಬೆಳೆದಿದ್ದು, 30 ಜನರಿಗೆ ಉದ್ಯೋಗ ನೀಡಿದ್ದಾರೆ. 12 ಸಾವಿರ ಗ್ರಾಹಕರನ್ನು ಹೊಂದಿದ್ದಾರೆ. ಇದರಲ್ಲಿ 4500 ಜನ ಶಾಶ್ವ್ವತ ಗ್ರಾಹಕರಿದ್ದಾರೆ. ಇವರಲ್ಲಿ ಅಡುಗೆ ಎಣ್ಣೆ, ಕೊಬ್ಬರಿ ಎಣ್ಣೆ, ಸಿರಿಧಾನ್ಯದ ಎಣ್ಣೆ ಲಭಿಸುತ್ತದೆ.

ರೈತರಿಂದ ಧಾನ್ಯಗಳನ್ನು ಖರೀದಿಸಿ ಅವುಗಳನ್ನು ಹದಗೊಳಿಸಿ ಗಾಣದ ಮೂಲಕ ಶುದ್ಧ್ದ ಎಣ್ಣೆ ತೆಗೆದು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ವಿವಿಧ ಬಗೆಯ ಎಣ್ಣೆ, ಸಿರಿಧಾನ್ಯ ಮತ್ತು ಇತರ ಉಪಯೋಗಿ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಮಾರುಕಟ್ಟೆ ಉಪಯೋಗಕ್ಕಾಗಿ ಆ್ಯಪ್ ನಿರ್ಮಿಸಿದ್ದು, ಈ ಮೂಲಕ ಗ್ರಾಹಕರನ್ನು ತಲುಪಲಾಗುತ್ತಿದೆ. ಎಣ್ಣೆ ತಯಾರಿಸುವಾಗ ಉತ್ಪತ್ತಿಯಾಗುವ ಹಿಂಡಿಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ವಾರ್ಷಿಕ 2 ಕೋಟಿ ರೂ.ಗೂ ಅಧಿಕ ಮೌಲ್ಯದ ವಹಿವಾಟು ನಡೆಸುತ್ತಿದ್ದು, 10 ಲಕ್ಷಕ್ಕೂ ಹೆಚ್ಚಿನ ಲಾಭಗಳಿಸುತ್ತಿದ್ದಾರೆ.

ಎಣ್ಣೆ ಪ್ಯಾಕಿಂಗ್‌ಗೆ ಪ್ಲಾೃಸ್ಟಿಕ್ ವಸ್ತು ಬಳಕೆ ಮಾಡದೆ ಗಾಜು, ಸ್ಟೀಲ್ ಡಬ್ಬಿಗಳನ್ನು ಬಳಕೆ ಮಾಡಲಾಗುತ್ತಿದೆ. ಸಾಂಪ್ರದಾಯಿಕ ಮಾದರಿಯಲ್ಲಿ ಎತ್ತುಗಳ ಮೂಲಕ ಎಣ್ಣೆ ತಯಾರಿಕೆ ಮಾಡುತ್ತಿರುವುದರಿಂದ ವಿದ್ಯುತ್ ಅವಶ್ಯಕತೆ ಇಲ್ಲ ಎನ್ನುತ್ತಾರೆ ನವೀನ್.

ಪತ್ನಿ ಆರ್.ರಮ್ಯಾ ಐಟಿ ಉದ್ಯೋಗದಲ್ಲಿದ್ದಾರೆ. ಮಗ ಗಗನ್ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಆಧುನಿಕತೆಯ ವೇಗದಲ್ಲಿ ಉತ್ತಮ ಆರೋಗ್ಯಕ್ಕೆ ರಾಸಾಯನಿಕಮುಕ್ತ ಆಹಾರ ಪದ್ಧತಿ ಬಹುಮುಖ್ಯವಾಗಿದ್ದು, ಸಾವಯವ ಪದ್ಧ್ದತಿಯಲ್ಲಿ ಬೆಳೆದ ಆಹಾರ ಧಾನ್ಯ, ಹಣ್ಣು, ತರಕಾರಿ, ಸೊಪ್ಪು ಹೆಚ್ಚಾಗಿ ಸೇವಿಸಬೇಕು ಎನ್ನುತ್ತಾರೆ ನವೀನ್.

50ಕ್ಕೂ ಹೆಚ್ಚು ತಳಿಯ ಮರಗಿಡಗಳು: ಸಾವಯವ ಕೃಷಿಯೊಂದಿಗೆ ಮಿಶ್ರ ತೋಟಗಾರಿಕೆ ಪದ್ಧ್ದತಿ ಅನುಸರಿಸಿರುವ ನವೀನ್ ಗಾಣದ ಎಣ್ಣೆಯ ವ್ಯಾಪಾರದ ಜತೆಗೆ ಮಿಶ್ರ ಪದ್ಧತಿಯಲ್ಲಿ 50ಕ್ಕೂ ಹೆಚ್ಚು ವಿವಿಧ ಜಾತಿಯ ಮರ ಗಿಡಗಳನ್ನು ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ಇವುಗಳಿಂದ ವಾರ್ಷಿಕ ಆದಾಯದ ಜತೆಗೆ ದಿನಬಳಕೆಗೂ ಬೇಕಾದ ತರಕಾರಿ, ಹಣ್ಣುಗಳು ಲಭ್ಯವಾಗುತ್ತಿದೆ. ಕೃಷಿಯಲ್ಲಿ ಸಾವಯವ ಪದ್ಧತಿ ಅಳವಡಿಸಿಕೊಂಡು ಧಾನ್ಯಗಳ ಸಿಪ್ಪೆ, ಗಾಣದಿಂದ ಹೊರಬರುವ ತ್ಯಾಜ್ಯ, ರಾಸುಗಳಿಂದ ಸಿಗುವ ಗೊಬ್ಬರವನ್ನು ಸಂಗ್ರಹಿಸಿ ಕಾಂಪೋಸ್ಟ್ ಮಾಡಿ ಬೆಳೆಗಳಿಗೆ ನೀಡಲಾಗುತ್ತಿದೆ. ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗುತ್ತಿದೆ. ಗಿಡಗಳಿಗೆ ಜೀವಾಮೃತ, ಗೋ ಕೃಪಾಮೃತವನ್ನು ಗಿಡಗಳಿಗೆ ಸಿಂಪಡಿಸಲಾಗುತ್ತಿದೆ.

ತೇಗ, ಬೇವು, ಬೀಟೆ, ಬಿಲ್ವಾರ, ಮತ್ತಿ, ಸಿಲ್ವಾರ್ ಮರಗಳನ್ನು ಆದಾಯದ ದೃಷ್ಟಿಯಿಂದ ಬೆಳೆಯಲಾಗುತ್ತಿದೆ. ತೆಂಗು, ಅಡಕೆ, ಬಾಳೆ, ಮಾವು, ಹಲಸು, ನೇರಳೆ, ಪಪ್ಪಾಯ, ಸೀಬೆ, ಅನಾನಸ್, ಕಿತ್ತಳೆ, ಮೂಸಂಬಿ, ಕರ್ಜೂರ, ಅಂಜೂರ, ಕರಿಬೇವು, ನುಗ್ಗೆ, ಬೇಲ, ಸಪೋಟ, ಸೀತಾಫಲ, ಲಕ್ಷ್ಮಣಫಲ, ರಾಮಫಲ, ಅಮಟೆಕಾಯಿ, ನೆಲ್ಲಿಕಾಯಿ, ಗೆಣಸು, ಶುಂಠಿ, ಮೆಣಸು, ವೀಳ್ಯದೆಲೆ, ಅರಿಶಿಣ, ಏಲಕ್ಕಿ, ಜಾಯಿಕಾಯಿ, ಚಕ್ಕೆಮರ, ಬೆಣ್ಣೆಹಣ್ಣು, ಅಶ್ವಗಂಧ, ಕಾಫಿ, ಸರ್ವ ಸಾಂಬಾರ, ಕೋಕೋ, ಹಂಟುದಳ, ಮಹಾಗನಿ, ನಿಂಬೆ, ಗಜನಿಂಬೆ, ಕಬ್ಬು ಹಾಗೂ ಔಷಧೀಯ ಗುಣಗಳುಳ್ಳ ಅಡಸೋಗೆ, ಇನ್ಸುಲಿನ್, ಇಪ್ಪಲಿ, ಇಂಗು, ರಣಪಾಲ ಸೇರಿದಂತೆ ಐವತ್ತಕ್ಕೂ ಹೆಚ್ಚು ಜಾತಿಯ ಹಣ್ಣು ಮತ್ತು ಇತರ ತೋಟಗಾರಿಕೆ ಬೆಳೆಗಳನ್ನು 1.30 ಎಕರೆ ಪ್ರದೇಶದಲ್ಲೇ ಬೆಳೆಯಲಾಗುತ್ತಿದೆ. ದನ-ಕರುಗಳಿಗೆ ಬೇಕಾದ ಮೇವು ಜಮೀನಿನಲ್ಲೇ ಉತ್ಪತ್ತಿಯಾಗುತ್ತಿದೆ.

ರಾಜ್ಯ ಮಟ್ಟದ ಪ್ರಶಸ್ತಿ: ನವೀನ್ ಅವರ ಕೃಷಿ ಮಾದರಿಯನ್ನು ಕಂಡು ಸರ್ಕಾರ ಉದಯೋನ್ಮುಖ ಕೃಷಿ ಪಂಡಿತ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ತಾಲೂಕು, ಜಿಲ್ಲಾ ಮಟ್ಟದ ಪ್ರಶಸ್ತಿ ಹಾಗೂ ಸಂಘ-ಸಂಸ್ಥೆಗಳಿಂದ ಸಾಕಷ್ಟು ಪುರಸ್ಕಾರಗಳು ಲಭಿಸಿವೆ. ವಿವಿಧ ಸಂಸ್ಥೆಗಳ ಕೃಷಿ ಮೇಳದಲ್ಲಿ ಭಾಗವಹಿಸಿ ಕೃಷಿಯಲ್ಲಿ ತಮ್ಮ ಅನುಭವ ಹಾಗೂ ಶಾಲಾ ಕಾಲೇಜುಗಳಲ್ಲಿ ತರಗತಿಯನ್ನು ನೀಡುತ್ತಿದ್ದಾರೆ. ಮಾಹಿತಿಗೆ ಎಚ್.ಆರ್.ನವೀನ್‌ಕುಮಾರ್ ಅವರನ್ನು ಅಡಗನಹಳ್ಳಿ, ಹೆಬ್ಬಾಳು ಹೋಬಳಿ, ಕೆ.ಆರ್.ನಗರ ತಾಲೂಕು (ಮೊ.9945811771) ಸಂಪರ್ಕಿಸಬಹುದಾಗಿದೆ.

ಎತ್ತುಗಳ ಬಳಕೆ: ಗಾಣಕ್ಕೆ ಬೇಕಾದ 2 ಎತ್ತುಗಳನ್ನು ಮಾತ್ರ ಖರೀದಿಸಿದ್ದ ನವೀನ್, ಗೋಶಾಲೆಯಿಂದ 20 ಎತ್ತು ಹಾಗೂ 5 ಹಸುಗಳನ್ನು ದತ್ತು ಪಡೆದು ಗಾಣ ತಿರುಗಿಸಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಸುಗಳಿಂದ ಲಭ್ಯವಾಗುವ ಹಾಲನ್ನು ಮನೆ ಬಳಕೆಗೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಇವುಗಳಿಂದ ಲಭ್ಯವಾಗುವ ಸಗಣಿಯಿಂದ ಗೋಬರ್ ಗ್ಯಾಸ್, ಜೀವಾಮೃತ, ಗೋ ಕೃಪಾಮೃತ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರಗಳನ್ನು ತಯಾರಿಸುವ ಮೂಲಕ ಅವುಗಳಿಂದಲೂ ಲಾಭ ಗಳಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net