ಕರೊನಾ ಎಫೆಕ್ಟ್, ಎಡೆಯೂರು ಸಿದ್ದಲಿಂಗೇಶ್ವರ ದೇಗುಲ ಸಿಬ್ಬಂದಿ ಕೃಷಿ ಕೆಲಸದಲ್ಲೇ ಬಿಜಿ!

edeyooru
Published on

ಕುಣಿಗಲ್​: ಕರೊನಾ ಸೋಂಕು ಹರಡುವ ಭೀತಿಯಿಂದಾಗಿ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಕ್ಷೀಣಿಸಿದ್ದು, ಕೆಲಸವಿಲ್ಲದೆ ಬಹುತೇಕ ದೇಗುಲ ಸಿಬ್ಬಂದಿ ಖಾಲಿ ಕೂತಿದ್ದಾರೆ. ಆದರೆ, ಈ ಎಡೆಯೂರು ಸಿದ್ದಲಿಂಗೇಶ್ವರ ದೇವಾಲಯದ ಸಿಬ್ಬಂದಿಗೆ ಮಾತ್ರ ಕೈತುಂಬಾ ಕೆಲಸ!

ಹೌದು, ಕರೊನಾ ಸಂಕಷ್ಟಕಾಲದಲ್ಲಿ ಕೆಲಸವಿಲ್ಲದೆ ಸುಮ್ಮನೆ ಕಾಲ ಕಳೆಯುವುದಕ್ಕಿಂತ ಸಿಕ್ಕ ಸಮಯವನ್ನು ಕೃಷಿ ಚಟವಟಕೆಗೆ ಬಳಸಿಕೊಳ್ಳಲು ಎಡೆಯೂರು ಸಿದ್ದಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿ ಹೆಜ್ಜೆಯಿಟ್ಟಿದೆ.

ಮುಜರಾಯಿ ಇಲಾಖೆ ಒಡೆತನದಲ್ಲಿರುವ ಸಿದ್ದಲಿಂಗೇಶ್ವರ ದೇವಾಲಯದ ಸಿಬ್ಬಂದಿಗೆ ಸರ್ಕಾರ ವೇತನ ನೀಡುತ್ತಿದ್ದರೂ ಸುಮ್ಮನೆ ಸಂಬಳ ತೆಗೆದುಕೊಳ್ಳುವುದು ಹೇಗೆ ಎಂದುಕೊಂಡ ಅಧಿಕಾರಿ ವರ್ಗ, ದೇವಸ್ಥಾನದ ನೂರಾರು ಎಕರೆಯಲ್ಲಿ ಕೃಷಿ ಮಾಡುತ್ತಿದೆ.

ದೇವಸ್ಥಾನದ ಇಒ ಲಕ್ಷ್ಮೀ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ ಕಗ್ಗೆರೆ ಸಿದ್ದಲಿಂಗೇಶ್ವರ ದೇಗುಲ ಪಕ್ಕದಲ್ಲಿರುವ ಜಮೀನಿನಲ್ಲಿ 1,500 ಬಾಳೆ ಗಿಡ ನೆಟ್ಟಿದ್ದಾರೆ. ಈಗಾಗಲೇ ತೆಂಗಿನ ಸಸಿ ನೆಡಲಾಗಿದ್ದು, ಅವುಗಳ ನಡುವೆಯೇ ಬಾಳೆ ಗಿಡ ಬೆಳೆಸಲಾಗುತ್ತಿದೆ. ಕೃಷಿಯ ಆದಾಯ ದೇವಸ್ಥಾನದ ಅಭಿವೃದ್ಧಿಗೆ ಬಳಕೆಯಾಗಲಿ ಎಂಬುದು ಆಡಳಿತ ಮಂಡಳಿ ಉದ್ದೇಶ.

ಕರೊನಾ ಸಮಯದಲ್ಲಿ ಸಿಬ್ಬಂದಿಯನ್ನು ಬಳಸಿಕೊಂಡು ದೇವಸ್ಥಾನದ ಜಮೀನಿನಲ್ಲಿ ಬಾಳೆ, ಹೂವು ಗಿಡ ಸೇರಿ ಅನೇಕ ಜಾತಿಯ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದು ಇಒ ಲಕ್ಷ್ಮೀ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net