ಧಾರವಾಡ ಕೃಷಿ ವಿಶ್ವ ವಿದ್ಯಾಲಯದ 36ನೇ ಘಟಿಕೋತ್ಸವ | ವೃಕ್ಷಮಾತೆ ತುಳಸಿಗೌಡ, ಸಂಶೋಧಕ ಅಬ್ದುಲ್‌ ಖಾದರ್​ಗೆ ಗೌರವ ಡಾಕ್ಟರೇಟ್ ಪ್ರದಾನ

Dr
Published on

ಧಾರವಾಡ: ಕೃಷಿ ವಿಶ್ವ ವಿದ್ಯಾಲಯದ 36ನೇ ಘಟಿಕೋತ್ಸವದಲ್ಲಿ ವೃಕ್ಷಮಾತೆ ತುಳಸಿಗೌಡ ಹಾಗೂ ಕೃಷಿ ಪರಿಕರಗಳ ಸಂಶೋಧಕ ಅಬ್ದುಲ್‌ ಖಾದರ್ ನಡಕಟ್ಟಿನ್‌ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಘಟಿಕೋತ್ಸವದಲ್ಲಿ ಕೃಷಿ ಸಚಿವ ಚೆಲುವಾರಾಯ ಸ್ವಾಮಿ, ಕೇಂದ್ರ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ವಿಭಾಗದ ಕಾರ್ಯದರ್ಶಿ ಡಾ. ಹಿಮಾಂಶು ಪಾಠಕ್ ಮುಂತಾದವರು ಭಾಗವಹಿಸಿದ್ದರು.

ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪ್ರದಾನ ಮಾಡಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಾತನಾಡುತ್ತಾ, ಭಾರತ ಕೃಷಿ ಪ್ರಧಾನ ದೇಶ. ಕೃಷಿಯೇ ಭಾರತದ ಆತ್ಮ. ಹೀಗಾಗಿಯೇ ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತಾರೆ. ದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಮಾಡುತ್ತಿವೆ ಎಂದು ಹೇಳಿದರು.

ಧಾರವಾಡ ಕೃಷಿ ವಿಶ್ವ ವಿದ್ಯಾಲಯದ 36ನೇ ಘಟಿಕೋತ್ಸವದಲ್ಲಿ 71 ಪಿಎಚ್‌ಡಿ, 269 ಸ್ನಾತಕೋತ್ತರ, 626 ಸ್ನಾತಕ ಪದವಿ ಸೇರಿ 966 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ. ವಿವಿಧ ರ್ಯಾಂಕ್ ವಿಜೇತರಿಗೆ 38 ಕೃಷಿ ವಿವಿ ಚಿನ್ನದ ಪದಕ, 6 ಇತರೆ ಪದಕ ವಿತರಣೆ ಮಾಡಲಾಗಿದೆ.

ಘಟಿಕೋತ್ಸವದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಇಂದು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ಸಂಶೋಧನೆಗಳ ಮೂಲಕ ರೈತರಿಗೆ ಹೊಸ ತಳಿಗಳನ್ನು ಕೊಡಬೇಕು. ಈ ನಿಟ್ಟಿನಲ್ಲಿ ಕೃಷಿ ಪದವೀಧರರು ತಮ್ಮ ಜ್ಞಾನವನ್ನು ಬಳಸಿಕೊಳ್ಳಬೇಕು. ನೌಕರಿ ಸೇರುವ ಬದಲು ಕೃಷಿ ಉದ್ಯಮ ಬೆಳೆಸಲು ಚಿಂತಿಸಬೇಕು. ಅಥವಾ ಕೃಷಿ ಪದವೀಧರರೇ ಕೃಷಿ ಉದ್ಯಮಿಗಳಾಗಿ ಬೆಳೆಯಬೇಕು. ಈ ಮೂಲಕ ಕೃಷಿ ಸಮಾಜ ಸಮೃದ್ಧಗೊಳಿಸಲು ಕೃಷಿ ಪದವೀಧರರು ಶ್ರಮಿಸಬೇಕು ಎಂದು ಹೇಳಿದರು.


ಪದ್ಮಶ್ರೀ ತುಳಸಿಗೌಡ

ಇವರು ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ ಮತ್ತು ಪರಿಸರಪ್ರೇಮಿ. ವೃಕ್ಷಮಾತೆ ಎಂದೆನಿಸಿಕೊಂಡಿರುವ ಇವರು ಲಕ್ಷಗಟ್ಟಲೇ ಮರಗಳನ್ನು ಬೆಳೆಸಿದ್ದಾರೆ. ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಅವರು ಅರಣ್ಯದಲ್ಲಿ ಸಸಿಗಳನ್ನು ಪೋಷಿಸುವ ಕಾರ್ಯ ಮಾಡುತ್ತಿದ್ದರು. ಇದನ್ನು ಗಮನಿಸಿ ಅರಣ್ಯಾಧಿಕಾರಿ ರೆಡ್ಡಿ ಎಂಬುವರು, ಮಾಸ್ತಿಕಟ್ಟೆ ಅರಣ್ಯ ವಲಯದಲ್ಲಿ ಸಸಿಗಳನ್ನು ಪೋಷಿಸುವ ಕೆಲಸ ಕೊಡಿಸಿದ್ದರು. ೫೭ ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಮಾಡಿ ನಿವೃತ್ತರಾಗಿದ್ದಾರೆ. ಇಳಿವಯಸ್ಸಿನಲ್ಲೂ ಅರಣ್ಯ ನರ್ಸರಿಗೆ ಹೋಗಿ ಯುವಕರಿಗೆ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದಾರೆ. 300ಕ್ಕೂ ಹೆಚ್ಚು ಕಾಡು ಮರಗಳ ಮಾಹಿತಿ ಹೊಂದಿರುವ ಇವರು ಸಸ್ಯವಿಜ್ಞಾನಿ, ಅರಣ್ಯ ವಿಶ್ವಕೋಶ, ವೃಕ್ಷದೇವಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇವರ ಪರಿಸರ ಕಾಳಜಿ ಮತ್ತು ಸೇವೆಯನ್ನು ಗಮನಿಸಿ ರಾಜ್ಯೋತ್ಸವ, ಕೇಂದ್ರ ಸರ್ಕಾರದ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅಬ್ದುಲ್‌ಖಾದರ ನಡಕಟ್ಟಿನ

ಇವರು ಅಣ್ಣಿಗೇರಿಯ ಕೃಷಿ ಸಲಕರಣೆಗಳ ಸಂಶೋಧಕ, ಸಮಾಜಸೇವಕ ಮತ್ತು ಪರಿಸರವಾದಿ. ಕೃಷಿ ಕುಟುಂಬದ ಇವರು ಓದಿದ್ದು ಪ್ರೌಢಶಿಕ್ಷಣ ಮಾತ್ರ. ಮುಂದೆ ಓದಲು ಬಯಸಿದರೂ ತಂದೆಯ ಸಲಹೆಯಂತೆ ಓದು ಮೊಟಕುಗೊಳಿಸಿ ಕೃಷಿ ಕಾಯಕದಲ್ಲಿ ತೊಡಗಿದರು. ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವುದು ಮತ್ತು ಇತರ ರೈತರಿಗೂ ನೆರವಾಗುವುದು ಇವರ ಗುರಿಯಾಗಿತ್ತು. ಅದರಂತೆ ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ನೆರವಾಗುವಂಥ 40ಕ್ಕೂ ಹೆಚ್ಚು ಸಲಕರಣೆಗಳ ಆವಿಷ್ಕಾರ ಮಾಡಿದ್ದಾರೆ. ಟ್ರ‍್ಯಾಕ್ಟರ್ ಚಾಲಿತ ನಟಕಟ್ಟಿನ ಬಿತ್ತುವ ಕೂರಿಗೆ ಈ ಭಾಗದಲ್ಲಿ ಬಹುಬೇಡಿಕೆ ಪಡೆದಿದೆ. ಶೇಂಗಾ ಕಟಾವು ಮಾಡಿ ರಾಶಿ ಮಾಡುವ ಯಂತ್ರವನ್ನು ಆವಿಷ್ಕರಿಸುತ್ತಿದ್ದಾರೆ. ತಮ್ಮ ಹತ್ತಾರು ಸಂಶೋಧನೆಗಳಿಗೆ ಪೇಟೆಂಟ್ ಪಡೆದಿರುವುದು ಇವರ ಹೆಮ್ಮೆ. ಇವರ ಸಾಧನೆಗೆ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net