ಕೃಷಿ ಬೆಳವಣಿಗೆ, ರೈತರ ಸಂಕಷ್ಟ ನಿವಾರಣೆಗೆ ಆಯೋಗ ವರದಿ: ಯಂತ್ರಗಳ ಖರೀದಿಗೆ ಸಬ್ಸಿಡಿ ಸೇರಿ ವಿವಿಧ ಶಿಫಾರಸು; ಸಿಎಂಗೆ ವರದಿ ಸಲ್ಲಿಕೆ

State CM
ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ನೀಡಿದ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು. ಸಿಎಂ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಉಪಸ್ಥಿತರಿದ್ದರು.
Published on

ಬೆಂಗಳೂರು: ಯಂತ್ರಗಳ ಖರೀದಿಗೆ ರಿಯಾಯಿತಿ ನೀಡುವುದು ಸೇರಿ ಕೃಷಿ ಬೆಳವಣಿಗೆ ಹಾಗೂ ರೈತರ ಸಂಕಷ್ಟ ನಿವಾರಣೆಗೆ ವಿವಿಧ ಶಿಫಾರಸು ಹಾಗೂ ವಿಶ್ಲೇಷಣಾ ವರದಿಯನ್ನು ಕೃಷಿ ಬೆಲೆ ಆಯೋಗ ಮುಖ್ಯಮಂತ್ರಿಗಳಿಗೆ ಸಲ್ಲಿಸಿತು. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಇಳುವರಿ, ಉತ್ಪಾದನೆ, ಸಾಗುವಳಿ ವೆಚ್ಚ ಮತ್ತು ಮಾರುಕಟ್ಟೆ ಬೆಲೆಗಳ ವಸ್ತುಸ್ಥಿತಿ ಹಾಗೂ ಉತ್ಪಾದಕರು ಮತ್ತು ಗ್ರಾಹಕರ ನಡುವಿನ ಬೆಲೆ ಪ್ರಸರಣದ ವಿಶ್ಲೇಷಣೆ ನಡೆಸಲಾಗಿದ್ದು, ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರದಿ ಸಲ್ಲಿಸಿದರು. ಆಯೋಗ ಪ್ರತಿ ಬೆಳೆಗಳ ವಸ್ತುಸ್ಥಿತಿ ಅಧ್ಯಯನ ಮಾಡಿ ಬೆಳೆ ಶಿಫಾರಸು, ಬೆಲೆ ಶಿಫಾರಸು ಎರಡು ವಿಭಾಗಗಳಲ್ಲಿ ಈ ವರದಿ ಸಲ್ಲಿಸಿದೆ. ವರದಿ 10 ಅಧ್ಯಾಯ ಒಳಗೊಂಡಿದ್ದು, ಕಾರ್ಯ ಪದ್ಧತಿ, ಉತ್ಪಾದನಾ ವೆಚ್ಚದ ಲೆಕ್ಕಾಚಾರ, ಪರಿಕರಗಳ ಬಳಕೆ, ಕೃಷಿ ಯಾಂತ್ರೀಕರಣ ಹಾಗೂ ಇಂಧನ ಬೆಲೆ ಏರಿಳಿತದ ಪರಿಣಾಮ, ಕೃಷಿ ಮಾರುಕಟ್ಟೆ ವಸ್ತುಸ್ಥಿತಿ, ಬೆಲೆ ಪ್ರಸರಣ, ಆತ್ಮನಿರ್ಭರ ಭಾರತ-ಸ್ವಾವಲಂಬಿ ಕರ್ನಾಟಕ, ರೈತ ಸ್ನೇಹಿ ಬೆಳೆ ವಿಶ್ಲೇಷಣೆ ಸೇರಿ ಸುಮಾರು 500 ಪುಟಗಳನ್ನು ಒಳಗೊಂಡಿದೆ. 2020-21ನೇ ಸಾಲಿನ ವಿಶ್ಲೇಷಣಾ ವರದಿ ಶಿಫಾರಸು 30 ಪುಟಗಳನ್ನು ಹೊಂದಿದೆ.

ಕೃಷಿ ಬೆಳವಣಿಗೆ, ರೈತರ ಸಂಕಷ್ಟ ಸೇರಿ ಅನೇಕ ವಿಷಯಗಳನ್ನು ಈ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ವೈಜ್ಞಾನಿಕ ಶಿಫಾರಸುಗಳನ್ನು ಮಾಡಿದೆ. ಸರ್ಕಾರ ಈ ವರದಿ ಮತ್ತು ಶಿಫಾರಸುಗಳನ್ನು ಅಧ್ಯಯನ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಂಡು ಅನುಷ್ಠಾನಗೊಳಿಸಬೇಕು. | ಹನುಮನಗೌಡ ಬೆಳಗುರ್ಕಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು

ಪ್ರಮುಖ ಶಿಫಾರಸುಗಳೇನು?

  • ಕೃಷಿ ವಲಯವಾರು ಹೆಚ್ಚು ಇಳುವರಿ ಕೊಡುವ ಹಾಗೂ ಬರ/ಜವುಗು ನಿರೋಧಕ ಮತ್ತು ರೋಗ/ಪೀಡೆ ನಿರೋಧಕ ತಳಿ ಸಂಶೋಧನೆ ಹೆಚ್ಚಿಸಬೇಕು.
  • ಕೃಷಿ ಯಂತ್ರಗಳ ಖರೀದಿಗೆ ಸಣ್ಣ ರೈತರಿಗೆ ಶೇ.90, ಮಧ್ಯಮ ರೈತರಿಗೆ ಶೇ.75 ಮತ್ತು ದೊಡ್ಡ ರೈತರಿಗೆ ಶೇ.50 ರಿಯಾಯಿತಿ ನೀಡಬೇಕು.
  • ಪಶು ಸಂಗೋಪನೆ, ಕುಕ್ಕುಟೋದ್ಯಮ ಮುಂತಾದವುಗಳಿಗೆ ಹೆಚ್ಚಿನ ಪೋ›ತ್ಸಾಹ ನೀಡಿ ಕೊಟ್ಟಿಗೆ ಗೊಬ್ಬರದ ಲಭ್ಯತೆ ಹೆಚ್ಚಿಸಬೇಕು.
  • ರಾಜ್ಯದ ಅಣೆಕಟ್ಟುಗಳ ವ್ಯಾಪ್ತಿಯಲ್ಲಿ ಇರುವ ನಾಲೆಗಳನ್ನು ಆಧುನೀಕರಿಸಿ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸಬೇಕು.
  • ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅನ್ವಯ ಏತ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
  • ಹೊಸ ಕೆರೆಗಳನ್ನು ನಿರ್ವಿುಸಬೇಕು ಮತ್ತು ಈಗಾಗಲೇ ಇರುವ ಕೆರೆಗಳನ್ನು ಆಧುನೀಕರಿಸಬೇಕು.
  • ಒಡ್ಡುಗಳು, ವೆಂಟೆಡ್ ಡ್ಯಾಮ್ಳು, ಉಪ್ಪು ನೀರು ಹೊರಹಾಕುವ ಡ್ಯಾಮ್ಳು, ನದಿಗಳು ಮತ್ತು ಹೊಳೆಗಳಿಗೆ ಅಣೆಕಟ್ಟು ಮತ್ತು ಪಿಕಪ್​ಗಳನ್ನು ನಿರ್ವಿುಸಬೇಕು.
  • ರೈತರು ತಮ್ಮ ಜಮೀನುಗಳಲ್ಲಿ ಬೀಳುವ ಮಳೆ ನೀರನ್ನು ಸ್ವಲ್ಪವೂ ಪೋಲಾಗದಂತೆ ಸಂರಕ್ಷಿಸಿಕೊಳ್ಳಲು ಹೊಲಕ್ಕೊಂದು ಕೆರೆ ಅಥವಾ ಕೃಷಿ ಹೊಂಡ ನಿರ್ವಿುಸುವ ಯೋಜನೆ ರೂಪಿಸಬೇಕು. ರೈತರು ಕೃಷಿ ಆದಾಯದ ಜತೆಗೆ ಹೈನುಗಾರಿಕೆ, ಕೋಳಿ ಸಾಕಣೆ, ಕುರಿ / ಮೇಕೆ ಸಾಕಣೆ, ಮೀನುಗಾರಿಕೆ, ಜೇನು ಕೃಷಿ, ರೇಷ್ಮೆ ಕೃಷಿ ಮಾಡಲು ಮತ್ತು ಹಣ್ಣಿನ ಬೆಳೆಗಳು, ಅರಣ್ಯ ಬೆಳೆಗಳು, ತೋಟದ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕು.
  • ರೈತರು ತಮ್ಮ ಜಮೀನಿನಲ್ಲಿಯೇ ಕೆರೆ / ಹೊಂಡ ನಿರ್ವಿುಸಿಕೊಂಡು ಜಲಮೂಲ ಹೊಂದಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯವನ್ನು ಪಡೆಯಲು ಅವಕಾಶ ಕಲ್ಪಿಸಬೇಕು.
  • ಸಾಗುವಳಿ ವೆಚ್ಚ ಹೆಚ್ಚಳದ ಕಾರಣ ಕೃಷಿ ಮತ್ತು ವಾಣಿಜ್ಯ ಬೆಳೆಗಳು/ ಬಹುವಾರ್ಷಿಕ ಬೆಳೆಗಳಿಗೆ ಅನುಕ್ರಮವಾಗಿ ಪ್ರತಿ ಹೆಕ್ಟೇರ್​ಗೆ 50 ಸಾವಿರದಿಂದ 1 ಲಕ್ಷ ರೂ.ವರೆಗೆ ಪರಿಹಾರ ಧನ ಒದಗಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.
  • ಕೃಷಿ / ತೋಟಗಾರಿಕೆ ಎಲ್ಲ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ತರಬೇಕು.
  • ಬೆಳೆ ವಿಮೆಯಲ್ಲಿ ರೈತರು ನೋಂದಾಯಿಸಿಕೊಳ್ಳುವುದು ಐಚ್ಛಿಕವಾಗಿರುವುದರ ಬದಲಾಗಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು.
  • ಕೇಂದ್ರ / ರಾಜ್ಯ ಸರ್ಕಾರಗಳು ಪಾವತಿಸುತ್ತಿರುವ ಕಿಸಾನ್ ಸಮ್ಮಾನ್ ಹಣದಲ್ಲಿ ರೈತರು ಭರಿಸಬೇಕಾದ ವಿಮಾ ಕಂತಿನ ಮೊತ್ತವನ್ನು ಭರಿಸಬಹುದಾಗಿದೆ.
  • 5 ವರ್ಷಗಳಲ್ಲೂ ರೈತರು ವಿಮಾ ಪರಿಹಾರ ಪಡೆಯದೆ ಇದ್ದಲ್ಲಿ ವಿಮಾ ಕಂತಿನ ಮೊತ್ತವನ್ನು ರೈತರ ಉಳಿತಾಯವೆಂದು ಪರಿಗಣಿಸಿ, ರೈತರ ಖಾತೆಗೆ ವರ್ಗಾಯಿಸಬೇಕು.
  • ಅಭಿವೃದ್ಧಿ ಪಡಿಸಲಾಗಿರುವ ತಂತ್ರಾಂಶಗಳನ್ನು ಕೃಷಿ ವಿಶ್ವವಿದ್ಯಾನಿಲಯಗಳ, ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಸೂಕ್ತ ತರಬೇತಿಯೊಂದಿಗೆ ರೈತರ ಹಂತಕ್ಕೆ ತಲುಪಿಸಬೇಕು.
  • ರೈತರು ಒತ್ತಾಯಿಸುತ್ತಿರುವ ಬೆಲೆ ಕೃಷಿ ಉತ್ಪನ್ನಗಳ ಖರ್ಚು ಆಧರಿಸಿರಬೇಕು. ಅಲ್ಲದೆ 1969ನ್ನು ಬ್ಯಾಂಕುಗಳು ರಾಷ್ಟ್ರೀಕೃತವಾದ ಮೂಲ ವರ್ಷವಾಗಿರಿಸಿಕೊಂಡು ಕೃಷಿ ವಸ್ತುಗಳ ಮತ್ತು ಕಾರ್ಖಾನೆ ವಸ್ತುಗಳ ಬೆಲೆ ಸಮತೋಲನ ಕಾಪಾಡುವಂತಿರಬೇಕು.
  • ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರಕಿಸುವಂತಾಗಲು ಕೇಂದ್ರ ಸರ್ಕಾರವು ಈಗ ಅನುಸರಿಸುತ್ತಿರುವ ಮಾನದಂಡ ಬದಲಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net