

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದ ಆಡಳಿತ ಬಗ್ಗೆ ಬಿಜೆಪಿ ವರಿಷ್ಠರು ಬಿಗಿ ನಿಲುವು ವ್ಯಕ್ತಪಡಿಸುತ್ತಿರುವುದರಿಂದ ಎಚ್ಚೆತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕುಸಿದಿರುವ ಆಡಳಿತಯಂತ್ರಕ್ಕೆ ಚುರುಕು ಮೂಡಿಸಲು ಮುಂದಾಗಿದ್ದಾರೆ. ಬೊಮ್ಮಾಯಿ ಅಧಿಕಾರಕ್ಕೆ ಬಂದು ಐದು ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಒಂದಷ್ಟು ಜನಪ್ರಿಯ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಆಡಳಿತಯಂತ್ರವನ್ನು ನಿರೀಕ್ಷಿತ ಮಟ್ಟದಲ್ಲಿ ಚುರುಕುಗೊಳಿಸಲು ಸಾಧ್ಯವಾಗಿಲ್ಲ ಎಂಬುದನ್ನು ವರಿಷ್ಠರು ಗಮನಿಸಿದ್ದಾರೆ. ಆ ಸಂದೇಶವನ್ನು ಬೇರೆ ಬೇರೆ ಸಂದರ್ಭದಲ್ಲಿ ತಲುಪಿಸಬೇಕಾದವರಿಗೆ ಕಳುಹಿಸಿದ್ದಾರೆ. ಅನೇಕ ಸಚಿವರು ನಿರೀಕ್ಷೆಯಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಎಂದೋ ವರಿಷ್ಠರನ್ನು ತಲುಪಿವೆ.
ರಾಜ್ಯದಲ್ಲಿ 2023ಕ್ಕೆ ವಿಧಾನಸಭೆ ಚುನಾವಣೆ ಇದ್ದರೂ ಸರ್ಕಾರಕ್ಕೆ ಇರುವ ಅವಧಿ ಕೇವಲ ಆರು ತಿಂಗಳು ಮಾತ್ರ. ಇನ್ನು ಆರು ತಿಂಗಳು ಕಳೆದರೆ ರಾಜ್ಯ ವಿಧಾನಸಭಾ ಚುನಾವಣೆಯ ಮೂಡ್ನತ್ತ ತಿರುಗುತ್ತದೆ. ಅದರ ನಡುವೆ ಬಿಬಿಎಂಪಿ, ಜಿಪಂ ಮತ್ತು ತಾಪಂ ಚುನಾವಣೆಗಳು ಎದುರಾಗುತ್ತವೆ. ಆಗ ಯಾವುದೇ ಸುಧಾರಣೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಈಗಲೇ ಎಚ್ಚೆತ್ತುಕೊಳ್ಳುವುದು ಬಿಜೆಪಿ ವರಿಷ್ಠರ ಉದ್ದೇಶವಾಗಿದೆ. ಸರ್ಕಾರದ ಬಗ್ಗೆ ದಿನೇದಿನೆ ಆಡಳಿತ ವಿರೋಧಿ ಅಲೆ ಪ್ರಬಲವಾಗುತ್ತ ಹೋದರೆ ಎಂಬ ಭಯ ಕಾಡುತ್ತಿರುವುದರಿಂದಲೇ ಬಿಜೆಪಿ ಹೈಕಮಾಂಡ್ ತಲೆ ಕೆಡಿಸಿಕೊಂಡಿದೆ. ಬಸವರಾಜ ಬೊಮ್ಮಾಯಿ ಅವರೇನೋ ರಾಜ್ಯವನ್ನು ಅಭಿವೃದ್ಧಿಪಥದಲ್ಲಿ ತೆಗೆದುಕೊಂಡು ಹೋಗಬೇಕು, 2025ಕ್ಕೆ ಆರ್ಥಿಕತೆ 500 ಬಿಲಿಯನ್ ಡಾಲರ್ಗೆ ತರಬೇಕೆಂದು ಸದುದ್ದೇಶ ಹೊಂದಿದ್ದಾರೆ. ಅದಕ್ಕೆ ತಕ್ಕಂತೆ ಆಡಳಿತ ಯಂತ್ರ ಸಜ್ಜಾಗುತ್ತಿಲ್ಲ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ನಂತರ ರಾಜ್ಯ ಬಿಜೆಪಿಯಲ್ಲಿ ನಡೆದಿರುವ ಬೆಳವಣಿಗೆಗಳು ಪಕ್ಷದ ಸಂಘಟನೆಗೆ ಪೂರಕವಾಗಿಲ್ಲ. ಚುನಾವಣೆಗಳಲ್ಲಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಇದರಿಂದಾಗಿಯೇ ಹೈಕಮಾಂಡ್ ಸರ್ಕಾರ ಹಾಗೂ ಪಕ್ಷ ಎರಡಕ್ಕೂ ಚುರುಕು ಮೂಡಿಸಲು ಮುಂದಾಗಿದೆ. ರಾಜ್ಯದಲ್ಲಿ ಐದು ತಿಂಗಳಿನಲ್ಲಿ ಏನೇನು ಕೆಲಸಗಳಾಗಿವೆ? ಯಾವ ಯಾವ ಇಲಾಖೆಯಲ್ಲಿ ಏನೇನು ಆದೇಶಗಳು ಪ್ರಕಟವಾಗಿವೆ? ಅವುಗಳ ಅನುಷ್ಠಾನ ಎಷ್ಟು ಬಿಡುಗಡೆಯಾಗಿದೆ? ಜಾರಿ ಹೇಗಿದೆ ಎಂಬ ಮಾಹಿತಿಯನ್ನು ಹೈಕಮಾಂಡ್ ಕೇಳಿದೆ ಎಂಬ ಸುದ್ದಿಯನ್ನು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಆದರೆ ಪಕ್ಷದ ರಾಜ್ಯ ಘಟಕದ ಮೂಲಗಳ ಪ್ರಕಾರ, ಹೈಕಮಾಂಡ್ ಈ ರೀತಿ ಮಾಹಿತಿ ಕೇಳುವುದಿಲ್ಲ. ಮುಖ್ಯಮಂತ್ರಿ ಅವರೇ ಮುಂಜಾಗ್ರತೆಯಿಂದ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುತ್ತಿರಬಹುದು ಎನ್ನಲಾಗುತ್ತದೆ.
ಆಗುತ್ತಿಲ್ಲ ಕಡತ ವಿಲೇ: ಸರ್ಕಾರದಲ್ಲಿ ಕಡತಗಳ ವಿಲೇವಾರಿ ಕುಸಿತವಾಗಿದೆ. ಆಡಳಿತ ಸುಧಾರಣಾ ಇಲಾಖೆ ಮೂಲಗಳ ಮಾಹಿತಿ ಪ್ರಕಾರ, 1.70 ಲಕ್ಷದಷ್ಟು ಕಡತಗಳು ವಿಲೇವಾರಿಯಾಗಬೇಕಾಗಿದೆ. ಇಲಾಖೆಯಿಂದ ಕೂಡಲೇ ಕಡತ ವಿಲೇವಾರಿ ಮಾಡಬೇಕು, ಇಲ್ಲದಿದ್ದರೆ ಕ್ರಮ ಅನಿವಾರ್ಯ ಎಂಬ ಎಚ್ಚರಿಕೆಯೂ ಎಲ್ಲ ಇಲಾಖೆ ಮುಖ್ಯಸ್ಥರಿಗೆ ರವಾನೆಯಾಗಿದೆ. ಜಿಡ್ಡುಗಟ್ಟಿರುವ ಆಡಳಿತ ಯಂತ್ರ ಸರಿ ದಾರಿಗೆ ತರುವ ಕೆಲಸ ಮಾತ್ರ ಆಗುತ್ತಿಲ್ಲ ಎಂಬ ದೂರುಗಳಿವೆ.
ಅಸಮಾಧಾನ-ಆಕ್ರೋಶ: ಸಂಪುಟದ ವಿವಿಧ ಸಚಿವರಿಗೆ ತಮ್ಮ ಇಲಾಖೆಗಳಿಗೆ ಅನುದಾನ ಬಿಡುಗಡೆ ತಡವಾಗುತ್ತಿದೆ, ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಯೋಜನೆಗಳ ಜಾರಿ ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನವಿದೆ. ತಮ್ಮ ಬೇಡಿಕೆಗಳ ಪತ್ರಗಳ ವಿಲೇವಾರಿ ತಡವಾಗುತ್ತಿದೆ ಎಂಬ ಆಕ್ರೋಶ ಶಾಸಕರಲ್ಲಿದೆ. ಈ ಅಸಮಾಧಾನ ಹಾಗೂ ಆಕ್ರೋಶ ವರಿಷ್ಠರಿಗೆ ತಲುಪಿದೆ. ಅದರಿಂದಲೇ ವರಿಷ್ಠರು ಸಂಪೂರ್ಣ ಮಾಹಿತಿ ಕೋರಿದ್ದಾರೆ ಎಂದು ಮೂಲಗಳು ಹೇಳಿವೆ. ಅದಕ್ಕೆ ತಕ್ಕ ಉತ್ತರ ನೀಡುವುದಕ್ಕೂ ಬೊಮ್ಮಾಯಿ ಈ ಆದೇಶಗಳ ಮೂಲಕ ಸಜ್ಜಾಗುತ್ತಿದ್ದಾರೆಂದು ತಿಳಿದುಬಂದಿದೆ.
ಸಿಎಂ ಕಚೇರಿಯಿಂದ ಪತ್ರ: ವರಿಷ್ಠರು ಮಾಹಿತಿ ಕೇಳಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಕಚೇರಿಯಿಂದ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದು ಬಸವರಾಜ ಬೊಮ್ಮಾಯಿ 2021ರ ಜುಲೈ 28ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಇಲಾಖೆಗಳಲ್ಲಿ ಪ್ರಕಟವಾಗಿರುವ ಆದೇಶಗಳ ಪ್ರತಿಯನ್ನು ಕಳುಹಿಸುವಂತೆ ಸೂಚನೆ ನೀಡಿದ್ದಾರೆ. ಇದು ಸರ್ಕಾರದ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ. ವಿವಿಧ ಇಲಾಖೆಗಳಿಂದ ಬರುವ ಆದೇಶದ ಪ್ರತಿಗಳನ್ನು ಒಟ್ಟುಗೂಡಿಸಿ ಪಕ್ಷದ ವರಿಷ್ಠರಿಗೆ ಕಳುಹಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಸಂಪುಟ ಸರ್ಜರಿ: ಈಗಾಗಲೆ ಸರ್ಕಾರದ ಬಗ್ಗೆ ಮಾಹಿತಿಯನ್ನು ತಮ್ಮದೇ ಖಾಸಗಿ, ಪಕ್ಷದ ಮೂಲಗಳಿಂದ ಪಡೆದಿರುವ ವರಿಷ್ಠರು, ಇದೀಗ ಸಿಎಂರಿಂದ ಹೋಗುವ ಮಾಹಿತಿ ಆಧರಿಸಿ ಸಂಪುಟ ಸರ್ಜರಿಯ ತೀರ್ವನಕ್ಕೆ ಬರಲಿದ್ದಾರೆ. ಬಹುತೇಕ ಮಾರ್ಚ್ನಲ್ಲಿ ಸರ್ಜರಿ ಸಾಧ್ಯತೆಗಳಿವೆ. ಯಾವ ಪ್ರಮಾಣದ ಸರ್ಜರಿ ಎಂಬುದನ್ನು ಮೋದಿ ಮತ್ತು ಅಮಿತ್ ಶಾ ಅವರೇ ತೆಗೆದುಕೊಳ್ಳಬೇಕಾಗಿದೆ.
ಅಧಿಕಾರಿಗಳ ಜತೆಗೂ ಸಭೆ: ಎಲ್ಲ ಇಲಾಖೆಯಿಂದ ಮಾಹಿತಿ ಪಡೆಯ ಲಿರುವ ಸಿಎಂ ಬೊಮ್ಮಾಯಿ ಸೋಮವಾರ ಆಡಳಿತ ಸುಧಾರಣೆಗೆ ಸಂಬಂಧಿಸಿ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಕೆಲವೊಂದು ನಿರ್ಧಾರ ಕೈಗೊಳ್ಳಲಾಗುತ್ತದೆ. ಆ ನಂತರ ಹೈಕಮಾಂಡ್ಗೆ ಮಾಹಿತಿ ರವಾನಿಸಲಾಗುತ್ತದೆ.
ಬೈಠಕ್ ಉದ್ದೇಶವೇನಿತ್ತು?: ನಂದಿಬೆಟ್ಟದಲ್ಲಿ ನಡೆಸಲು ಉದ್ದೇಶಿಸಿದ್ದ ಚಿಂತನಾ ಸಭೆಯಲ್ಲಿ ಸರ್ಕಾರವನ್ನು ಹೇಗೆ ನಡೆಸಬೇಕು? ಯಾವ ಯಾವ ಇಲಾಖೆಗಳಲ್ಲಿ ಹೇಗೆ ಪ್ರಗತಿ ಸಾಧಿಸಬೇಕು? ಜನರಿಗೆ ಕಣ್ಣಿಗೆ ಕಾಣುವ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವುದು ಹೇಗೆ? ಬಿಜೆಪಿಯ ರೀತಿ ನೀತಿಗಳನ್ನು ಹೇಗೆ ಸರ್ಕಾರದ ಕಾರ್ಯಕ್ರಮಗಳ ಮೂಲಕ ಜನರಿಗೆ ತಲುಪಿಸಬೇಕು ಎಂಬ ಬಗ್ಗೆ ಮಾಹಿತಿ ನೀಡುವ ಉದ್ದೇಶವನ್ನು ಬಿಜೆಪಿ ವರಿಷ್ಠರು ಹೊಂದಿದ್ದರು. ಬಹುತೇಕ ಕೋವಿಡ್ ನಿಯಂತ್ರಣಕ್ಕೆ ಬಂದನಂತರ ನಡೆಸಲಾಗುತ್ತದೆ ಎಂದು ರಾಜ್ಯ ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.