

ಬೆಂಗಳೂರು: ಚಂದ್ರಯಾನ-3ರ ವಿಚಾರದಲ್ಲಿ ವಿರೂಪಗೊಳಿಸಿದ ಚಾಯ್ವಾಲಾ ಫೋಟೋ ಪೋಸ್ಟ್ ಮಾಡಿ, ವಿವಾದಕ್ಕೆ ಒಳಗಾಗಿದ್ದ ನಟ ಪ್ರಕಾಶ್ ರಾಜ್ ನಿರಂತರವಾಗಿ ಟ್ರೋಲ್ಗೆ ಒಳಗಾಗುತ್ತಲೇ ಇದ್ದಾರೆ. ಮತ್ತೊಂದೆಡೆ ಅವರು ಕೂಡ ಮೋದಿ ಬೆಂಬಲಿಗರ ಕಾಲೆಳೆಯುವುದನ್ನು ಮುಂದುವರಿಸಿದ್ದು, ಮತ್ತೆ ಮತ್ತೆ ಪೋಸ್ಟ್ ಮಾಡಿ ಕೆಣಕುತ್ತಲೂ ಇದ್ದಾರೆ.
ಚಂದ್ರಯಾನ ವಿಚಾರದಲ್ಲಿ ಮಾಡಿದ್ದ ಪೋಸ್ಟ್ಗೆ ಬಂದ ಆಕ್ಷೇಪ, ಎದುರಿಸಿದ ಟ್ರೋಲ್ಗೆ ಪ್ರತಿಯಾಗಿ ಪ್ರಕಾಶ್ ರಾಜ್ ಕೂಡ ಒಂದಾದ ಮೇಲೊಂದರಂತೆ ಪೋಸ್ಟ್ ಮಾಡಿದ್ದು, ಮತ್ತೆ ಮತ್ತೆ ಟ್ರೋಲ್ಗೆ ಒಳಗಾಗಿದ್ದಾರೆ. ಇದೀಗ ಅವರು ಇನ್ನೆರಡು ವಿಚಾರವಾಗಿ ಕೇಂದ್ರ ಸರ್ಕಾರವನ್ನು, ಮೋದಿ, ಮೋದಿ ಬೆಂಬಲಿಗರನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ್ದಾರೆ.
69ನೇ ರಾಷ್ಟ್ರೀಯ ಚಲನಚಿತ್ರಗಳ ಪ್ರಶಸ್ತಿಯಲ್ಲಿ ಜೈ ಭೀಮ್ ಸಿನಿಮಾ ಆಯ್ಕೆ ಆಗದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಪ್ರಕಾಶ್ ರಾಜ್, 'ಮಹಾತ್ಮನ ಕಗ್ಗೊಲೆಯನ್ನು ಸಮರ್ಥಿಸುವವರು.. ಬಾಬಾ ಸಾಹೇಬರ ಸಂವಿಧಾನವನ್ನು ಕೊಲ್ಲ ಹೊರಟವರು #JaiBhim ಸಂಭ್ರಮಿಸುವರೆ #justasking' ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಚಂದ್ರಯಾನ-3ರ ವಿಚಾರದಲ್ಲಿ ಲ್ಯಾಂಡಿಂಗ್ ವೇಳೆ ಇಸ್ರೋ ಲೈವ್ನಲ್ಲಿ ಬಂದು ಅಲ್ಲಿನ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತಾಡಿದ್ದ ಪ್ರಧಾನಿಯನ್ನು ಇನ್ನೊಂದು ಎಕ್ಸ್ ಪೋಸ್ಟ್ನಲ್ಲಿ ಟೀಕಿಸಿದ್ದಾರೆ. 2011ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದಾಗ ಮೋದಿ ಪ್ರಧಾನಿ ಆಗಿದ್ದರೆ ಎಂದು ವ್ಯಕ್ತಿಯೊಬ್ಬರು ಎಡಿಟ್ ಮಾಡಿ ಹಾಕಿದ್ದ ಎಕ್ಸ್, ರಿಪೋಸ್ಟ್ ಮಾಡಿಕೊಂಡಿರುವ ಪ್ರಕಾಶ್ ರಾಜ್, ನಕ್ಕು ಕೋಟ್ ಮಾಡಿದ್ದಾರೆ. ಇವು ಈಗ ಪ್ರಕಾಶ್ ರಾಜ್ ವಿರುದ್ಧ ಮತ್ತಷ್ಟು ಜನ ಮುಗಿಬೀಳುವಂತೆ ಮಾಡಿದ್ದು, ನಟ ಟ್ರೋಲ್ಗೂ ಒಳಗಾಗುತ್ತಿದ್ದಾರೆ.