

ರಾಯಚೂರು: ಸದ್ಯ ದೇಶದಲ್ಲಿ ಕರೊನಾ ಸೋಂಕು ಹೆಚ್ಚುತ್ತಿದೆ. ಹಾಗಾಗಿ ಮತ್ತೊಮ್ಮೆ ಲಾಕ್ಡೌನ್ ಮಾಡುವುದು ಅನಿವಾರ್ಯ ಎಂಬ ಮಾತೂ ಕೇಳಿಬರುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್ ಅನಿವಾರ್ಯ ಎಂದೂ ಹೇಳಲಾಗುತ್ತಿದೆ.
ಈ ಮಧ್ಯೆ ಇಂದು ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಲಾಕ್ಡೌನ್ ತೆಗೆದ ಮೇಲೆ ಕರೊನಾ ಸೋಂಕು ಹೆಚ್ಚಾಗಿದೆ. ಹಾಗಾಗಿ ಇನ್ನೂ 20 ದಿನ ದೇಶದಲ್ಲಿ ಲಾಕ್ಡೌನ್ ಹೇರಬೇಕು. ಜನರ ಆರೋಗ್ಯ ಮುಖ್ಯವೇ ಹೊರತು, ಆರ್ಥಿಕತೆ ಅಲ್ಲ ಎಂದಿದ್ದಾರೆ.
ಆದರೆ ಮತ್ತೆ ಲಾಕ್ಡೌನ್ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಈ ಹಿಂದೆ ಸುಮಾರು ದಿನಗಳ ಕಾಲ ಲಾಕ್ಡೌನ್ ಆಗಿತ್ತು. ಅದಾದರೂ ಕರೊನಾ ಸೋಂಕು ಹೆಚ್ಚುತ್ತಲೇ ಇರುತ್ತದೆ. ಕರೊನಾ ತಡೆಗೆ ಲಾಕ್ಡೌನ್ಕ್ಕಿಂತ ಜನರ ಸಹಕಾರ ಮುಖ್ಯ ಎಂದಿದ್ದಾರೆ. ಇದನ್ನೂ ಓದಿ: ದೆಹಲಿ ಗಲಭೆಯಲ್ಲಿ ಪಾಲ್ಗೊಂಡು ಜೈಲು ಸೇರಿದ್ದ ಜಾಮಿಯಾ ವಿವಿಯ ಗರ್ಭಿಣಿ ವಿದ್ಯಾರ್ಥಿನಿಗೆ ಜಾಮೀನು…
ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಕಾನೂನು ಮಾಡಿ, ಲಾಕ್ಡೌನ್, ಸೀಲ್ಡೌನ್ ಮಾಡುವುದರಿಂದ ಕರೊನಾ ತಡೆಯಲು ಸಾಧ್ಯವಿಲ್ಲ. ಜನರು ಕೂಡ ಸರ್ಕಾರದ ಜತೆಗೆ ಕೈ ಜೋಡಿಸಬೇಕು. ಅಂದಾಗ ಮಾತ್ರ ಕರೊನಾ ನಿಯಂತ್ರಣ ಆಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಎದುರು ನಿಂತಿದ್ದೇನೆ, ನಾನು ಒಂದು ರೂಪಾಯಿಯನ್ನು ಮುಟ್ಟಿಲ್ಲ: ಬಿ.ವೈ. ವಿಜಯೇಂದ್ರ ಪ್ರಮಾಣ
ಹಾಗೇ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಪಕ್ಷದವರು ವಿರೋಧ ಮಾಡಬೇಕು ಎಂದು ಎಲ್ಲದನ್ನೂ ವಿರೋಧಿಸಬಾರದು. ಎಚ್.ಡಿ.ಕುಮಾರಸ್ವಾಮಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಅವರೂ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಎಂದು ಟಾಂಗ್ ನೀಡಿದರು.
ಲಾಕ್ಡೌನ್ ಮಾಡಿದರೆ ನೌಕರರಿಗೆ ಸಂಬಳ ಹೇಗೆ ನೀಡಬೇಕು? ಪ್ರತಿತಿಂಗಳೂ 5-6 ಸಾವಿರ ಕೋಟಿ ರೂ.ಸಂಬಳ ನೀಡಬೇಕು. ಪ್ರತಿನಿತ್ಯ ಜನರ ಜೀವನ ನಡೆಯಬೇಕು. ಅದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದರು. (ಏಜೆನ್ಸೀಸ್)