ದೆಹಲಿ ಗಲಭೆಯಲ್ಲಿ ಪಾಲ್ಗೊಂಡು ಜೈಲು ಸೇರಿದ್ದ ಜಾಮಿಯಾ ವಿವಿಯ ಗರ್ಭಿಣಿ ವಿದ್ಯಾರ್ಥಿನಿಗೆ ಜಾಮೀನು...

Safoora Jargar 23 June 20
Published on

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ದೆಹಲಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಪಟ್ಟಂತೆ ಬಂಧಿತಳಾಗಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿನಿಗೆ ಇಂದು ದೆಹಲಿ ಹೈಕೋರ್ಟ್​ ಜಾಮೀನು ನೀಡಿದೆ.

ದೆಹಲಿ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪದಡಿ ಸಫೂರ ಜಾರ್ಗರ್​ ಅವರನ್ನು ಬಂಧಿಸಲಾಗಿತ್ತು. ಯುಎಪಿಎ ಆ್ಯಂಟಿ-ಟೆರರ್​ ಕಾನೂನಿನಡಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು.

ಆದರೆ ಸಫೂರಾ ಜಾರ್ಗರ್​ ಗರ್ಭಿಣಿಯಾಗಿರುವ ಕಾರಣ ಮಾನವೀಯತೆ ದೃಷ್ಟಿಯಿಂದ ಜಾಮೀನು ನೀಡಲಾಗಿದೆ. ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ಅವರೂ ಕೂಡ ಸಫೂರಾಗೆ ಜಾಮೀನು ನೀಡಲು ಒಪ್ಪಿಗೆ ನೀಡಿದ ಬಳಿಕ ಹೈಕೋರ್ಟ್​ ಮಂಜೂರು ಮಾಡಿದೆ. ಸಫೂರಾ ಜಾರ್ಗರ್​ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯ ಎಂಫಿಲ್​ ವಿದ್ಯಾರ್ಥಿನಿಯಾಗಿದ್ದು, ಇದೀಗ 5 ತಿಂಗಳ ಗರ್ಭಿಣಿ. ಇದನ್ನೂ ಓದಿ: ಯೋಗ ಮಾಡಿದ ಮಾಜಿ ಕ್ರಿಕೆಟರ್​ ಮೊಹಮ್ಮದ್​ ಕೈಫ್​ ವಿರುದ್ಧ ಕೆಟ್ಟ ಟೀಕೆ, ವ್ಯಂಗ್ಯದ ಮಾತುಗಳು…

ಜಾಮಿಯಾ ಸಮನ್ವಯ ಸಮಿತಿಯ ಸದಸ್ಯೆಯೂ ಆಗಿರುವ ಸಫೂರಾ ಫೆಬ್ರವರಿಯಲ್ಲಿ ದೆಹಲಿಯ ಜಾಫ್ರಾಬಾದ್​ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಗಲಭೆಯಲ್ಲಿ ಪಾಲ್ಗೊಂಡಿದ್ದಳು. ಮೊದಲು ಶುರುವಾದ ಪ್ರತಿಭಟನೆ ನಂತರ ಕೋಮುಗಲಭೆಯಾಗಿ ಪರಿವರ್ತನೆಯಾಗಿತ್ತು. ಸಫೂರಾಳನ್ನು ಏಪ್ರಿಲ್​ನಲ್ಲಿ ಪೊಲೀಸರು ಬಂಧಿಸಿದ್ದರು.

ಇಂದು ಜಾಮೀನು ನೀಡಿರುವ ದೆಹಲಿ ಹೈಕೋರ್ಟ್​ ಸಫೂರಾಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ದೆಹಲಿ ಗಲಭೆಯ ತನಿಖೆಗೆ ಅಡ್ಡಿಯುಂಟುಮಾಡುವ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಸೂಚನೆ ನೀಡಿದೆ. ದೆಹಲಿಯನ್ನು ಬಿಡುವಂತಿಲ್ಲ, ಎಲ್ಲೇ ಹೋಗಬೇಕೆಂದರೂ ಅನುಮತಿ ಪಡೆಯಬೇಕು ಎಂದು ಹೇಳಿದೆ.

ತನಿಖಾಧಿಕಾರಿಗಳು ಸಫೂರಾಗೆ 15ದಿನಕ್ಕೊಮ್ಮೆಯಾದರೂ ಕರೆ ಮಾಡಬೇಕು. ಆಗ ಅವರ ಸಂಪರ್ಕಕ್ಕೆ ಸಿಗಲೇಬೇಕು ಎಂದು ಹೇಳಿರುವ ಹೈಕೋರ್ಟ್​, 10,000 ರೂಪಾಯಿಯ ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಶ್ಯೂರಿಟಿ ನೀಡಬೇಕು ಎಂದು ಸೂಚನೆ ನೀಡಿದೆ. ಇದನ್ನೂ ಓದಿ: ತಾಲೂಕು ಕೇಂದ್ರದಲ್ಲೇ ಪರೀಕ್ಷಾ ಕೇಂದ್ರ ಆರಂಭಿಸಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಟೇಶ ಸೂಚನೆ

ಈ ಹಿಂದೆ ಸಫೂರಾಗೆ ಜಾಮೀನು ನೀಡುವುದಕ್ಕೆ ದೆಹಲಿ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ಆಕೆ ಗರ್ಭಿಣಿ ಎಂಬ ಕಾರಣಕ್ಕೆ ಅವಳು ಮಾಡಿದ ಅಪರಾಧ ಕಡಿಮೆ ಎಂದು ಭಾವಿಸಬಾರದು ಎಂದು ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net