

ಬೆಂಗಳೂರು: ಕಳೆದ ನವೆಂಬರ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಈ ಬಾರಿ ಚಳಿಗಾಲದ ಅವಧಿ ಇಳಿಮುಖವಾಗಿದ್ದರೂ ಹವಾಮಾನ ಬದಲಾವಣೆಯಿಂದಾಗಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮತ್ತೆ ಚಳಿ ಕಾಣಿಸಿಕೊಂಡಿದೆ.
ಉತ್ತರದಿಂದ ದಕ್ಷಿಣಕ್ಕೆ ಗಾಳಿ ಬೀಸುತ್ತಿರುವುದು, ತಾಪಮಾನದಲ್ಲಿ ತೇವಾಂಶ ಇರುವುದು ಸೇರಿ ಇನ್ನಿತರ ಕಾರಣಗಳಿಂದ ಬೆಳಗಾವಿ, ಬೀದರ್, ವಿಜಯಪುರ ಮತ್ತು ಹುಬ್ಬಳ್ಳಿ ಸೇರಿ ಉತ್ತರ ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ಚಳಿ ಕಾಣಿಸಿದೆ. ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ.
ಹವಾಮಾನ ವೈಪರೀತ್ಯ ತಜ್ಞ ಡಾ.ಎಂ.ಬಿ.ರಾಜೇಗೌಡ ಮಾತನಾಡಿ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಚಳಿ ಮುಂದಿನ ಒಂದು ವಾರ ಇರಲಿದೆ. ನಂತರ, ಕ್ರಮೇಣ ಇಳಿಕೆಯಾಗಲಿದೆ. ಈ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಸರಾಸರಿ 3-4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇಳಿಕೆಯಾಗಿದೆ. ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ವಾಡಿಕೆಯಂತೆ ಉಷ್ಣಾಂಶ ದಾಖಲಾಗುತ್ತಿದೆ ಎಂದರು.
ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಶುಭ್ರ ವಾತಾವರಣ ಹಾಗೂ ಉತ್ತರದಿಂದ ದಕ್ಷಿಣಕ್ಕೆ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಕುಸಿತವಾಗಿದೆ. ಮಧ್ಯಪ್ರದೇಶ, ಒರಿಸ್ಸಾ, ಛತ್ತೀಸ್‌ಗಢದಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕುಸಿತವಾದರೆ ನಮ್ಮ ರಾಜ್ಯದಲ್ಲಿಯೂ ತಾಪಮಾನ ಕುಸಿತವಾಗಲಿದೆ. ಉತ್ತರದಿಂದ ದಕ್ಷಿಣ ಕಡೆಗೆ ಬೀಸುತ್ತಿರುವ ಗಾಳಿಯೂ ನೇರವಾಗಿ ಉತ್ತರ ಕರ್ನಾಟಕ ಜಿಲ್ಲೆಗಳ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಆ ಜಿಲ್ಲೆಗಳಲ್ಲಿ ಚಳಿ ಕಾಣಿಸಿಕೊಂಡಿದೆ ಎಂದು ಹೇಳಿದರು.