Army ಸಮವಸ್ತ್ರ ತೊಟ್ಟು ವಂಚಿಸುತ್ತಿದ್ದವನ ಬಂಧನ; ಪೊಲೀಸರು ಹೇಳಿದಿಷ್ಟು

Sanjay Dodiya
Published on

ಅಹಮದಾಬಾದ್​: ಭಾರತೀಯ ಸೇನೆಯ ಸಮವಸ್ತ್ರವನ್ನು (Indian Army Uniform) ಧರಿಸಿ ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತ್​ನ ಪೋರ್​ಬಂದರ್​ನಲ್ಲಿ ನಡೆದಿದೆ.

ಬಂಧಿತನನ್ನು  ಸಂಜಯ್ ದೋಡಿಯಾ (36) ಎಂದು ಗುರುತಿಸಲಾಗಿದ್ದು, ಈತ ರಾಜ್​ಕೋಟ್​ ನಿವಾಸಿ ಎಂದು ತಿಳಿದು ಬಂದಿದೆ. ಸದ್ಯ ಆತನನ್ನು ಜಾಮೀನಿನ ಮೇಲೆ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಪೋರ್​ಬಂದರ್​ನ ಕಮಲಾಭಾಗ್​ ಪ್ರದೇಶದಲ್ಲಿ ವ್ಯಕ್ತಿಯೋರ್ವ ಸೇನಾ ಸಮವಸ್ತ್ರ (Army Uniform) ಧರಿಸಿ ಜನರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿತ್ತು. ಈ ಬಗ್ಗೆ ತೆರಳಿ ಆತನನ್ನು ವಿಚಾರಿಸಿ ಐಡಿ ಕಾರ್ಡ್ ತೋರಿಸುವಂತೆ ಹೇಳಿದಾಗ ಆತ ಮನೆಯಲ್ಲೇ ಮರೆತು ಬಂದಿರುವುದಾಗಿ ಹೇಳಿದ.

ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ಯೋಧನಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಆತನ ವಿರುದ್ಧ ಬಿಎನ್‌ಎಸ್ 168ರ ಕಲಂ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಭಾರತದ ಸೇನಾಪಡೆ, ಅರೆ ಸೇನಾಪಡೆ, ಪೊಲೀಸ್ ಪಡೆಗಳ ಸಮವಸ್ತ್ರ, ಸಮವಸ್ತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ನಕಲು ಮಾಡುವುದನ್ನು ನಿಷೇಧಿಸುತ್ತದೆ. ಇದನ್ನು ಉಲ್ಲಂಘಿಸಿದವರಿಗೆ ಮೂರು ತಿಂಗಳು ಜೈಲು ಶಿಕ್ಷೆ ಅಥವಾ ₹2 ಸಾವಿರ ದಂಡ ವಿಧಿಸಲಾಗುತ್ತದೆ. ಸದ್ಯ ಆತನಿಗೆ ಎಚ್ಚರಿಕೆ ನೀಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net