

ನವದೆಹಲಿ: ಕರೊನಾದ ಚೇತರಿಸಿಕೊಂಡರೂ ಗುಣಮುಖರಾದವರು ಬೇರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಕೋವಿಡ್ ಬೆನ್ನಿಗೆ ಬೇರೆ ಬೇರೆ ರೋಗಗಳಿಂದ ಬಳಲಾರಂಭಿಸಿದ್ದಾರೆ. ಇದಕ್ಕೆ ಕೋವಿಡ್ ಚಿಕಿತ್ಸೆ ವೇಳೆ ಬಳಸುವ ಔಷಧದ ಅಡ್ಡಪರಿಣಾಮವೇ ಕಾರಣ ಎಂಬುದನ್ನು ಅರಿತುಕೊಂಡಿರುವ ವೈದ್ಯರು, ಇದೀಗ ಅದರ ಬಳಕೆಯನ್ನು ಆದಷ್ಟೂ ತಪ್ಪಿಸುವಂತೆ ಸಲಹೆ ನೀಡಿದ್ದಾರೆ.
ಕರೊನಾದಿಂದ ಗುಣಮುಖರಾದವರು, ಚೇತರಿಸಿಕೊಂಡ ಕೆಲವೇ ದಿನಗಳಲ್ಲಿ ಬ್ಲ್ಯಾಕ್ ಫಂಗಸ್, ಬೋನ್ ಡೆತ್ ಸೇರಿದಂತೆ ನಾನಾ ರೋಗಗಳಿಗೆ ಒಳಗಾಗುತ್ತಿದ್ದಾರೆ. ಇದಕ್ಕೆಲ್ಲ ಕೋವಿಡ್ ಟ್ರೀಟ್ಮೆಂಟ್ ವೇಳೆ ನೀಡಲಾಗುತ್ತಿರುವ ಸ್ಟೆರಾಯ್ಡ್ಸ್ ಕಾರಣ ಎಂಬುದು ತಿಳಿದುಬಂದಿದ್ದಾಗಿ ವೈದ್ಯರು ಹೇಳಿದ್ದಾರೆ.
ಕೋವಿಡ್ನಿಂದ ಗುಣಮುಖರಾದ ಬಹಳಷ್ಟು ಮಂದಿ ಚೇತರಿಸಿಕೊಂಡ ಕೆಲವು ತಿಂಗಳುಗಳಿಂದ ಒಂದು ವರ್ಷದೊಳಗೆ ಕೀಲುನೋವು, ಸೊಂಟ-ಭುಜ ಮುಂತಾದ ನೋವುಗಳಿಗೆ ಒಳಗಾಗುತ್ತಿದ್ದಾರೆ. ಮೂಳೆಗೆ ಆಗುತ್ತಿರುವ ಹಾನಿಯ ಪರಿಣಾಮದಿಂದ ಹೀಗಾಗುತ್ತಿದೆ. ಇದಕ್ಕೆ ಕೋವಿಡ್ ವೇಳೆ ನೀಡಲಾಗುವ ಸ್ಟೆರಾಯ್ಡ್ಸ್ ಕಾರಣ. ಸ್ಟೆರಾಯ್ಡ್ಸ್ ಒಂದು ರೀತಿಯಲ್ಲಿ ಎರಡು ಅಲಗಿನ ಕತ್ತಿಯಂತೆ. ಅತಿಯಾದ ಸ್ಟೆರಾಯ್ಡ್ಸ್ ಬಳಕೆ ಮ್ಯಾರೋ ಒಡಿಮಾ ಎಂಬ ಕಾಯಿಲೆಗೆ ಕಾರಣವಾಗುತ್ತದೆ. ಇದು ಮೂಳೆಗೆ ರಕ್ತ ಸರಬರಾಜು ಆಗುವುದನ್ನೇ ಕಡಿತಗೊಳಿಸುತ್ತದೆ ಎಂದು ಎನ್ಎಚ್ಎಸ್ ಆಸ್ಪತ್ರೆಯ ಡಾ. ಶುಭಾಂಗ್ ಅಗರ್ವಾಲ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಸಾಧಾರಣ ಸೋಂಕಿನ ಸಂದರ್ಭದಲ್ಲಿ ಸ್ಟೆರಾಯ್ಡ್ಸ್ ಬಳಕೆ ಆದಷ್ಟೂ ತಪ್ಪಿಸಬೇಕು ಎಂಬುದಾಗಿ ಇವರೂ ಸೇರಿದಂತೆ ಹಲವು ವೈದ್ಯರು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)