

ಮುಂಬೈ: ದೇಶದ ವಾಣಿಜ್ಯ ನಗರಿ ಕೋಟ್ಯಂತರ ಜನರಿಗೆ ಜೀವನಾಧಾರ. ಮೂಲೆಮೂಲೆಗಳಿಂದ ಇಲ್ಲಿಗೆ ಬಂದು ಕನಸು ಕಟ್ಟಿಕೊಂಡು ಬದುಕು ಸಾಗಿಸುತ್ತಾರೆ. ಆ ಕನಸುಗಳು ನನಸಾದಾಗ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ.
ಅಂತೆಯೇ ಉತ್ತರಪ್ರದೇಶದ ಜೌನ್ಪುರ ಜಿಲ್ಲೆ ಮೊಕಾಲ್ಪುರದ ರಾಜನ್ ಯಾದವ್ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ. 13 ವರ್ಷಗಳಿಂದ ಬಾಡಿಗೆ ಆಟೋ ಓಡಿಸುತ್ತಿದ್ದ ಆತ ಆರು ತಿಂಗಳ ಹಿಂದಷ್ಟೇ ಹೊಸ ಆಟೋಗೆ ಮಾಲೀಕನಾಗಿದ್ದ. ಹೊಸ ಜೀವನ ಆರಂಭಿಸಿದ್ದ. ಆದರೆ, ಲಾಕ್ಡೌನ್ ಪರಿಣಾಮವಾಗಿ ಕಳೆದೆರಡು ತಿಂಗಳಿನಿಂದ ಆಟೋ ಚಲಾಯಿಸುವುದೇ ದುಸ್ತರವಾಗಿತ್ತು. ಇದ್ದ ಹಣವೆಲ್ಲ ಖರ್ಚಾದ ಬಳಿಕ, ಇನ್ನಿಲ್ಲಿ ಉಳಿದರೆ ಉಳಿಗಾಲವಿಲ್ಲವೆಂದು ಆಟೋದಲ್ಲಿ ಹುಟ್ಟೂರಿಗೆ ತೆರಳಲು ಸಜ್ಜಾದ. ಇದಕ್ಕಾಗಿ ನೆರೆಯವರು ಹಾಗೂ ಸ್ನೇಹಿತರ ಬಳಿ 3,000 ರೂ. ಸಾಲ ಪಡೆದಿದ್ದ.
ಮುಂಬೈನಿಂದ ಮೊಕಾಲ್ಪುರ ಅಂದಾಜು 1,500 ಕಿ.ಮೀಗೂ ಹೆಚ್ಚು ದೂರವಿದೆ. ಪತ್ನಿ, ಮಕ್ಕಳು ಹಾಗೂ ಸಂಬಂಧಿಕರ ಮತ್ತಿಬ್ಬರು ಮಕ್ಕಳು ಆಟೋಗೆ ಜತೆಯಾದರು. ಬೈಕ್ನಲ್ಲಿ ಮತ್ತಿಬ್ಬರು ಸಂಬಂಧಿಕರು ಹಿಂಬಾಲಿಸುತ್ತಿದ್ರು. ಬರೋಬ್ಬರಿ ಮೂರು ದಿನಗಳ ಪ್ರಯಾಣದ ಬಳಿಕ ಫತೇಫುರ್ ಜಿಲ್ಲೆಯ ಖಾಘಾ ತಲುಪಿತ್ತು. ಊರು ಕೇವಲ 200 ಕಿ.ಮೀ ದೂರವಿತ್ತು. ಅಷ್ಟರಲ್ಲಿ ಬೈಕ್ನಲ್ಲಿ ಹಿಂಬಾಲಿಸುತ್ತಿದ್ದವರು ವೇಗ ಪಡೆದುಕೊಂಡು ಮುಂದಕ್ಕೆ ತೆರಳಿದ್ದಾರೆ.
ಇದಾದ ಕೊಂಚ ಸಮಯದ ಬಳಿಕ ಟ್ರಕ್ಗೆ ಆಟೋ ಡಿಕ್ಕಿಯಾಗಿದೆ. ಪತ್ನಿ ಸಂಜು ಆಕೆಯ ಮಡಿಲಲ್ಲಿ ಮಲಗಿದ್ದ ಮಗಳು ಆರು ವರ್ಷದ ನಂದಿನಿ ಟ್ರಕ್ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಾಜನ್ ಹಾಗೂ ಮಗ ನಿಖಿಲ್, ಸಂಬಂಧಿಯ ಪುತ್ರ ಆಕಾಶ್ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇಷ್ಟು ದೂರ ಪ್ರಯಾಣಿಸಿ ಮನೆಗೆ ನಾನು ಕೊಂಡೊಯ್ಯುತ್ತಿರುವುದಾದರೂ ಏನನ್ನು ನೋಡಿ ಎಂದು ಆಂಬುಲೆನ್ಸ್ನಲ್ಲಿದ್ದ ಮೃತದೇಹದೆದುರು ರಾಜನ್ ಅಳುತ್ತಿದ್ದರೆ ಅಲ್ಲಿದ್ದವ ಕಣ್ಣಾಲಿಗಳು ತೇವವಾಗಿದ್ದವು.