ಕೇರಳದಲ್ಲಿ ಆಫ್ರಿಕನ್​ ಹಂದಿ ಜ್ವರ ಉಲ್ಬಣ; ವ್ಯಾಪಕ ಕಟ್ಟೆಚ್ಚೆರ

African Pig Swine
Published on

ಕಣ್ಣೂರು: ಕೇರಳದಲ್ಲಿ ದಿನದಿಂದ ದಿನಕ್ಕೆ ಅಫ್ರಿಕನ್​ ಹಂದಿ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಕಣ್ಣೂರು ಜಿಲ್ಲೆಯ ಕಣಿಚಾರ ಎಂಬ ಗ್ರಾಮದಲ್ಲಿ ರೋಗ ಪತ್ತೆಯಾಗಿದೆ. ಹಂದಿಜ್ವರ ಪ್ರಕರಣ ವರದಿಯಾಗುತ್ತಿದ್ದಂತೆ ಎಚ್ಚೆತ್ತಿರುವ ಜಿಲ್ಲಾ ಆಡಳಿತ ಪ್ರದೇಶದ ಸುತ್ತ ಫಾರ್ಮ್​ಗಳಲ್ಲಿ ಸಾಕಿರುವ ಹಂದಿಗಳನ್ನು ಕೊಂದು ಹೂಳುವಂತೆ ಸೂಚನೆ ನೀಡಲಾಗಿದೆ.

ಕಣ್ಣೂರು ಜಿಲ್ಲೆಯಲ್ಲಿರುವ ಮಲೆಯಂಪಾಡಿಯಲ್ಲಿರುವ ಫಾರ್ಮ್​ ಒಂದರಲ್ಲಿ ಸಾಕಿರುವ ಹಂದಿಯಲ್ಲಿ ಜ್ವರ ಕಾಣಿಸಿಕೊಂಡಿರುವುದನ್ನು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದರು. ಇದಾದ ಬಳಿಕ ಮಲೆಯಂಪಾಡಿ ಗ್ರಾಮದ ಸುತ್ತ 10 ಕಿಲೋಮೀಟರ್​ ವ್ಯಾಪ್ತಿಯಲ್ಲಿರುವ ಫಾರ್ಮ್​ಗಳಲ್ಲಿ ಸಾಕಲಾಗಿರುವ ಹಂದಿಗಳನ್ನು ಕೊಂದು ಶಿಷ್ಟಾಚಾರದ ಪ್ರಕಾರ ಮಣ್ಣು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

African Pig Swine

ಮಲೆಯಂಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಹಂದಿ ಮಾಂಸ ಮಾರಾಟ ಹಾಗೂ ಸಾಗಣೆಯನ್ನು ಮುಂದಿನ ಮೂರು ತಿಂಗಳವರೆಗೆ ನಿಷೇಧಿಸಲಾಗಿದೆ. ಹಂದಿ ಜ್ವರ ಪತ್ತೆಯಾದ ಸಾಕಾಣಿಕೆ ಕೇಂದ್ರದ ಒಂದು ಕಿಲೋಮೀಟರ್​ ಪ್ರದೇಶವನ್ನು ಸೋಂಕು ಪತ್ತೆ, 10 ಕಿಲೋಮೀಟರ್​ ವ್ಯಾಪ್ತಿಯನ್ನು ರೋಗ ಕಣ್ಗಾವಲು ಪ್ರದೇಶವೆಂದು ಘೋಷಿಸಲಾಗುತ್ತದೆ.

ಮಲೆಯಂಪಾಡಿ ಹಾಗೂ ಕಣಿಚಾರ್​ ಪ್ರದೇಶಗಳಲ್ಲಿರುವ ಸಾಕಾಣಿಕೆ ಕೇಂದ್ರಗಳಿಂದ ಹಂದಿಗಳನ್ನು ಮಾರಾಟ ಮಾಡಲಾಗಿತ್ತೆ ಎಂಬುದರ ಕುರಿತು ಸ್ಥಳೀಯರಿಂದ ಮಾಹಿತಿ ಪಡೆಯಲಾಗುತ್ತಿದೆ. ತುರ್ತು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net