

ಲಡಾಖ್: ಮೂರು ದಿನಗಳ ಲಡಾಖ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಪ್ಯಾಂಗಾಂಗ್ ಸರೋವರಕ್ಕೆ ಬೈಕ್ ರೈಡ್ ಮಾಡಿದ್ದಾರೆ. ಆಗಸ್ಟ್ 20ರಂದು ತಮ್ಮ ತಂದೆ ದಿ. ರಾಜೀವ್ ಗಾಂಧಿ ಅವರ ಜನ್ಮ ದಿನಾಚರಣೆಯನ್ನು ಪ್ಯಾಂಗಾಂಗ್ ಸರೋವರದಲ್ಲಿ ಆಚರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ರಾಹುಲ್ ಗಾಂಧಿ ಬೈಕ್ ರೈಡ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವೈರಲ್ ಆಗಿದೆ. ತಮ್ಮ ತಂದೆಯವರ ಜನುಮದಿನದ ನಿಮಿತ್ತ ರಾಹುಲ್ ಗಾಂಧಿ ಪ್ಯಾಂಗಾಂಗ್ ಸರೋವರದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ನಮ್ಮ ಪಯಣ ಪ್ಯಾಂಗಾಂಗ್ ಸರೋವರದ ಕಡೆಗೆ. ಇದು ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದು ಎಂದು ನಮ್ಮ ತಂದೆಯವರು ಹೇಳುತ್ತಿದ್ದರೆಂದು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಶುಕ್ರವಾರ ಲಡಾಖ್ಗೆ ಆಗಮಿಸಿದ ರಾಹುಲ್ ಗಾಂಧಿ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ 500ಕ್ಕೂ ಹೆಚ್ಚು ಯುವಕರೊಂದಿಗೆ ಸಂವಾದ ನಡೆಸಿದ್ದಾರೆ. ಬಳಿಕ ಸ್ಥಳೀಯರೊಂದಿಗೆ ಫುಟ್ಬಾಲ್ ಆಡಿ ಕಾಲಕಳೆದಿದ್ದಾರೆ.