

ಲಖನೌ: ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರವು ಬಿಡುಗಡೆಯಾದ ದಿನದಿಂದಲ್ಲೂ ಒಂದಿಲ್ಲೊಂದು ವಿಶೇಷತೆಗಳಿಂದಾಗಿ ಸಿನಿ ರಸಿಕರ ಗಮನ ಸೆಳೆಯುತ್ತಿದೆ. ಬಾಕ್ಸ್ಆಫೀಸ್ನಲ್ಲಿ ಚಿತ್ರದ ಅಬ್ಬರ ಸದ್ಯಕ್ಕಂತು ನಿಲ್ಲುವ ಯಾವುದೇ ಮುನ್ಸೂಚನೆ ಕಂಡು ಬಂದಿಲ್ಲ. ಬಾಕ್ಸ್ ಆಫೀಸ್ ಪಂಡಿತರ ಪ್ರಕಾರ ಚಿತ್ರವು ಶನಿವಾರ 500 ಕೋಟಿ ರೂಪಾಯಿಯ ಗಡಿ ದಾಟಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ಚಿತ್ರ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ಸೂಪರ್ಸ್ಟಾರ್ ರಜನಿಕಾಂತ್ ಜೈಲರ್ ಸಿನಿಮಾವನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ವೀಕ್ಷಿಸಲಿದ್ದಾರೆ. ಈ ವಿಚಾರವನ್ನು ಖುದ್ದು ರಜನಿಕಾಂತ್ ಅವರೇ ಖಚಿತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ರಜನಿಕಾಂತ್ ದೇವರ ದೆಸೆಯಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಶನಿವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಚಿತ್ರ ವೀಕ್ಷಿಸಲಿದ್ದೇನೆ ಎಂದು ಲಖನೌ ವಿಮಾನ ನಿಲ್ದಾಣದಲ್ಲಿ ತಿಳಿಸಿದ್ದಾರೆ.
ಚಿತ್ರ ಪ್ರದರ್ಶನಕ್ಕೂ ಮುನ್ನ ರಜಿನಿಕಾಂತ್ ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜ್ಯಪಾಲರ ಜೊತೆಗಿನ ಭೇಟಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ.