

Afghan-Pak: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆಗಳು ವಿಫಲವಾಗಿದ್ದು, ಉಭಯ ದೇಶಗಳ ನಡುವೆ ಕದನ ವಿರಾಮ ಜಾರಿಯಲ್ಲಿರಲಿದೆ ಎಂದು ತಾಲಿಬಾನ್ ಶನಿವಾರ( ಅ 9) ದೃಢಪಡಿಸಿದೆ.
ಪಾಕಿಸ್ತಾನದ ಆಂತರಿಕ ಭದ್ರತೆಯ ಜವಾಬ್ದಾರಿಯನ್ನು ಕಾಬೂಲ್ ವಹಿಸಿಕೊಳ್ಳುವಂತೆ ಇಸ್ಲಾಮಾಬಾದ್ ಒತ್ತಾಯಿಸಿದ್ದರಿಂದ ಮಾತುಕತೆಗಳು ಮುರಿದುಬಿದ್ದಿವೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ, ಈ ಸ್ಥಿತಿಯು ಅಫ್ಘಾನಿಸ್ತಾನದ ಸಾಮರ್ಥ್ಯವನ್ನು ಮೀರಿದ್ದು ಎಂದು ವಿವರಣೆ ನೀಡಿದ್ದಾರೆ. ಸದ್ಯ ಸ್ಥಾಪಿತವಾಗಿರುವ ಕದನ ವಿರಾಮವನ್ನು ನಾವು ಇಲ್ಲಿಯವರೆಗೆ ಉಲ್ಲಂಘಿಸಿಲ್ಲ, ಅದನ್ನು ಮುಂದುವರಿಸಲಾಗುವುದು ಎಂದು ಮುಜಾಹಿದ್ ಹೇಳಿದರು.
ಗಡಿ ಘರ್ಷಣೆಯನ್ನು ತಡೆಯಲು ಇಸ್ತಾನ್‌ಬುಲ್‌ನಲ್ಲಿ ನಡೆದ ಶಾಂತಿ ಮಾತುಕತೆ ವಿಫಲವಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಹೇಳಿದ್ದರು. ಅಫ್ಘಾನ್ ಪ್ರದೇಶದಿಂದ ಯಾವುದೇ ದಾಳಿಗಳು ನಡೆಯದ ಹೊರತು ಕದನ ವಿರಾಮ ಮುಂದುವರಿಯುತ್ತದೆ ಎಂದು ತಿಳಿಸಿದ್ದರು. ಇಸ್ತಾನ್‌ಬುಲ್‌ನಲ್ಲಿ ಮಾತುಕತೆಗಳು ಪುನರಾರಂಭವಾದಾಗ, ಅಫಘಾನ್ ಮತ್ತು ಪಾಕಿಸ್ತಾನಿ ಪಡೆಗಳು ತಮ್ಮ ಹಂಚಿಕೆಯ ಗಡಿಯಲ್ಲಿ ಗುಂಡಿನ ಚಕಮಕಿ ನಡೆಸಿದ ಒಂದು ದಿನದ ಬಳಿಕ ಮಾತುಕತೆಗಳು ವಿಫಲವಾದವು .
ಟರ್ಕಿಶ್ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಅವರು ಶನಿವಾರ ಬಾಕುದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾದರು ಮತ್ತು ಚರ್ಚೆಗಳು ಶಾಶ್ವತ ಸ್ಥಿರತೆಯತ್ತ ಫಲಿತಾಂಶಗಳನ್ನು ನೀಡುತ್ತವೆ ಎಂದು ಆಶಿಸಿದರು. ಉಭಯ ದೇಶಗಳ ನಡುವೆ ಸಂವಾದವನ್ನು ಸುಗಮಗೊಳಿಸುವ ಟರ್ಕಿಯ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಎಂದು ಅವರ ಕಚೇರಿಯ ಮೂಲಗಳು ತಿಳಿಸಿವೆ.
ಇತ್ತೀಚಿನ ತಿಂಗಳುಗಳಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಿದೆ. ಕಳೆದ ತಿಂಗಳು ಎರಡೂ ದೇಶಗಳ ಮಿಲಿಟರಿಗಳು ಘರ್ಷಣೆ ನಡೆಸಿ ಡಜನ್ಗಟ್ಟಲೆ ಜನರನ್ನು ಬಲಿ ತೆಗೆದುಕೊಂಡಿದ್ದು, 2021 ರಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರದ ಅತ್ಯಂತ ಭೀಕರ ಹಿಂಸಾಚಾರ ಇದಾಗಿದೆ. ಅಕ್ಟೋಬರ್‌ನಲ್ಲಿ ದೋಹಾದಲ್ಲಿ ಎರಡೂ ದೇಶಗಳು ಕದನ ವಿರಾಮಕ್ಕೆ ಸಹಿ ಹಾಕಿದವು, ಆದರೆ ಇಸ್ತಾನ್‌ಬುಲ್‌ನಲ್ಲಿ ನಡೆದ ಎರಡನೇ ಸುತ್ತಿನ ಮಾತುಕತೆ ದೀರ್ಘಾವಧಿಯ ಒಪ್ಪಂದವಿಲ್ಲದೆ ಕೊನೆಗೊಂಡಿತು. ಪಾಕಿಸ್ತಾನಕ್ಕೆ ಪ್ರತಿಕೂಲವಾಗಿರುವ ಅಫ್ಘಾನಿಸ್ತಾನದೊಳಗೆ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಗುಂಪುಗಳ ಕುರಿತಾದ ಭಿನ್ನಾಭಿಪ್ರಾಯಗಳಿಂದ ಈ ಬಿಕ್ಕಟ್ಟು ಉಂಟಾಗಿದೆ ಎಂದು ವರದಿಯಾಗಿದೆ.
ಒಂದು ಕಾಲದಲ್ಲಿ ನಿಕಟ ಮಿತ್ರರಾಗಿದ್ದ ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಸಂಬಂಧಗಳು ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗಿ ಹದಗೆಟ್ಟಿವೆ. ಅಕ್ಟೋಬರ್‌ನಲ್ಲಿ ಕಾಬೂಲ್ ಮತ್ತು ಇತರ ಸ್ಥಳಗಳ ಮೇಲೆ ಪಾಕಿಸ್ತಾನಿ ತಾಲಿಬಾನ್ ನಾಯಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ವೈಮಾನಿಕ ದಾಳಿ ನಡೆಸಿದ ನಂತರ ಘರ್ಷಣೆಗಳು ನಡೆದವು.(ಏಜೆನ್ಸೀಸ್)