

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ವನ್ನು ಸಮಾಜ ಹೃದಯಪೂರ್ವಕವಾಗಿ ಸ್ವೀಕರಿಸಿದೆ. ವಿವಿಧ ಕಾರಣಗಳಿಂದ ಸಂಘವನ್ನು ನಿಂದಿಸುವವರಿಗೂ ಆರ್ಎಸ್ಎಸ್ ಕಾರ್ಯದ ಬಗ್ಗೆ ಅರಿವಿದೆ. ಆದ್ದರಿಂದ ಅವರ ನಿಂದನೆ ಕೇವಲ ಬಾಯಿಮಾತಿಗೆ ಸೀಮಿತವಾಗಿದೆಯೇ ಹೊರತು ಹೃದಯದ ಮಾತಲ್ಲ. ಇಡೀ ಸಮಾಜದ ಹೃದಯ ಸಂಘದ ಪರವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದ್ದಾರೆ. ಆರ್ಎಸ್ಎಸ್ಗೆ 100 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹೊಸಕೆರೆಹಳ್ಳಿಯ ಪಿಇಎಸ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನವ ಕ್ಷಿತಿಜ ಎಂಬ ಎರಡು ದಿನಗಳ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಆರ್ಎಸ್ಎಸ್ ದೇಶದ ಅಂದಿನ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ರೂಪಿಸಿದ ಸಂಘಟನೆ ಎಂದು ಕೆಲವರ ತಪ್ಪು ತಿಳಿವಳಿಕೆ. ಆದರೆ ಅದು ಸತ್ಯವಲ್ಲ. ಸಂಘವು ಯಾವುದಕ್ಕೂ ಪ್ರತಿಕ್ರಿಯೆಯಾಗಿಯಾಗಲೀ, ವಿರೋಧವಾಗಿಯಾಗಲೀ ಜನ್ಮತಳೆದಿಲ್ಲ. ಇಡೀ ಸಮಾಜವನ್ನು ಸಂಘಟಿಸುವ ಭಾವನೆಯಿಂದ ಜನ್ಮತಳೆದಿದೆ. ಭಾರತ ಹಿಂದು ರಾಷ್ಟ್ರವಾಗಿದ್ದು, ಇಲ್ಲಿರುವ ಸನಾತನ ಸಂಸ್ಕೃತಿ ಅದಕ್ಕೆ ಸಾಕ್ಷಿಭೂತವಾಗಿದೆ. ಇದನ್ನು ಕಳೆದ 100 ವರ್ಷಗಳಿಂದ ಸಂಘ ಪ್ರತಿಪಾದಿಸಿಕೊಂಡು ಬಂದಿದೆ. ಆರ್ಎಸ್ಎಸ್ ಸ್ಥಾಪಿಸಿದ ಡಾ. ಕೇಶವ ಬಲಿರಾಮ್ ಹೆಡಗೇವಾರ್, ದೇಶವನ್ನು ಸ್ವತಂತ್ರಗೊಳಿಸಲು ನಡೆದ ಎಲ್ಲ ರೀತಿಯ ಪ್ರಯತ್ನಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ವೈದ್ಯಕೀಯ ವೃತ್ತಿಯ ನಂತರ ದೊರಕಿದ ಉನ್ನತ ವೇತನದ ನೌಕರಿಯ ಜೊತೆಗೆ, ವಿವಾಹವಾಗುವ ಆಲೋಚನೆಯನ್ನೂ ಬದಿಗೊತ್ತಿ ದೇಶಕಾರ್ಯದಲ್ಲಿ ತೊಡಗಿಸಿಕೊಂಡರು.
ಸಮಾಜವನ್ನು ಸಂಘಟಿಸಲು ನಮ್ಮ ಪೂರ್ವಜರು ಬಳಸಿದ ಮಾರ್ಗಗಳನ್ನೇ ಅನುಸರಿಸಿ, ಅವುಗಳಲ್ಲಿದ್ದ ನ್ಯೂನತೆಗಳನ್ನು ಹೊರತೆಗೆದ ನಂತರ ಮೂಡಿಬಂದ ಮಾರ್ಗವೇ ಸಂಘ. ಸಂಘವು ಈಗ ಪ್ರಬಲ ಸಂಘಟನೆಯಾಗಿದ್ದು, ಇಡೀ ಸಮಾಜವೇ ಆರ್ಎಸ್ಎಸ್ ಆಗಬೇಕು ಎನ್ನುವುದು ಸಂಘದ ಉದ್ದೇಶ. ಇಂತಹ ಕಾರ್ಯಕ್ರಮವನ್ನು ಆಯೋಜಿಸುವುದರ ಹಿಂದೆ ಯಾರನ್ನೂ ನಮ್ಮ ಪರವಾಗಿ ಮನವೊಲಿಸುವ ಉದ್ದೇಶವಲ್ಲ. ಸರಿಯಾದ ಮಾಹಿತಿಯ ಆಧಾರದಲ್ಲಿ ಸಂಘದ ಕುರಿತು ಪರ ಅಥವಾ ವಿರುದ್ಧವಾದ ನಿಲುವನ್ನು ತಳೆಯಲು ಪ್ರತಿಯೊಬ್ಬರು ಸ್ವತಂತ್ರರು ಎಂದು ಭಾಗವತ್ ಹೇಳಿದರು.
ವೇದಿಕೆಯಲ್ಲಿ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ಡಾ.ಪಿ. ವಾಮನ ರಾವ್ ಶೆಣೈ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್. ಉಮಾಪತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಸರಕಾರ್ಯವಾಹ ಮುಕುಂದ ಸಿ.ಆರ್., ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಢೆ, ಅಖಿಲ ಭಾರತೀಯ ಸಂಪರ್ಕ ಪ್ರಮುಖ್ ರಾಮಲಾಲ್, ಸಹಸಂಪರ್ಕ ಪ್ರಮುಖರಾದ ರಮೇಶ್ ಪಪ್ಪಾ, ಭರತ್ ಭೂಷಣ್, ಸುನೀಲ್ ದೇಶಪಾಂಡೆ, ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್, ಸಹಪ್ರಚಾರ ಪ್ರಮುಖರಾದ ಪ್ರದೀಪ್ ಜೋಷಿ, ನರೇಂದ್ರ ಕುಮಾರ್, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಸುಧೀರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪ್ರತಿ ದೇಶಕ್ಕೂ ಕೂಡ ಒಂದು ಕೋರ್ ಕಲ್ಚರ್ ಇರುತ್ತದೆ. ಅಂತೆಯೇ ಭಾರತದ ಕೋರ್ ಕಲ್ಚರ್ ಹಿಂದು. ಆ ಹಿಂದುತ್ವದ ಆಧಾರದಲ್ಲಿ ದೇಶವನ್ನು ಒಗ್ಗೂಡಿಸುವ ಕೆಲಸ ಆರ್ಎಸ್ಎಸ್ ಮಾಡುತ್ತಿದೆ. ಎಷ್ಟೋ ಜನ ಈ ದೇಶದಲ್ಲಿ ಅಂತರಂಗದಲ್ಲಿ, ತಮ್ಮ ಮನೆಯಲ್ಲಿ ತಾವು ಹಿಂದುಗಳೆಂದು ಹೇಳಿಕೊಳ್ಳುತ್ತಾರೆ. ಆದರೆ ಬಹಿರಂಗವಾಗಿ ಹಿಂದುಗಳೆಂದು ಹೇಳಿಕೊಳ್ಳದಿರುವುದು ದುರಾದೃಷ್ಟ. 1925ನೇ ಇಸವಿಯ ಸೆ.22ರ ವಿಜಯದಶಮಿಯಂದು ಹೆಡಗೆವಾರ್ ಅವರು ಘೋಷಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು ವ್ಯಕ್ತಿ ನಿರ್ವಣದ ಮೂಲಕ ದೇಶ ನಿರ್ವಣದ ಪರಿಕಲ್ಪನೆಯೊಂದಿಗೆ ನೂರು ವರ್ಷಗಳಿಂದ ಕಾರ್ಯ ಮಾಡುತ್ತಿದೆ. ಆರ್ಎಸ್ಎಸ್ ಸಂಸ್ಥೆಗೆ ಮತ್ತೊಂದು ಯಾವ ಸಂಸ್ಥೆಯೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಸಮಾಜವನ್ನು ಒಗ್ಗೂಡಿಸುವ, ಆ ಮೂಲಕ ದೇಶವನ್ನು ಸದೃಢಗೊಳಿಸುವುದು ನಮ್ಮ ಪರಮ ಗುರಿ. ಹಿಂದು ಸಂಸ್ಕೃತಿ ಹಲವು ತಲೆಮಾರುಗಳಿಂದ ಆಚರಿಸಿಕೊಂಡು ರಕ್ಷಿಸಲ್ಪಟ್ಟಿದೆ. 12 ಸಾವಿರ ವರ್ಷಗಳ ಹಿಂದೆ ಶ್ರೀರಾಮ ಈ ಧರ್ಮ-ಸಂಸ್ಕೃತಿಯನ್ನು ರಕ್ಷಿಸಿದ್ದಾನೆ. ಭಾರತ ಎಂದೆಂದಿಗೂ ಹಿಂದು ರಾಷ್ಟ್ರ ಎಂಬುದನ್ನು ಸಂಘ ಪ್ರತಿಪಾದಿಸಿಕೊಂಡೇ ಬಂದಿದೆ ಎಂದು ಮೋಹನ್ ಭಾಗವತ್ ಎಳೆ ಎಳೆಯಾಗಿ ಹಿಂದುತ್ವದ ವಿಚಾರಧಾರೆ ಬಿಚ್ಚಿಟ್ಟರು.
ಭಾರತದಲ್ಲಿರುವವರೆಲ್ಲರೂ ತಮ್ಮ ಜಾತಿ, ಮತ, ಸಂಪ್ರದಾಯವನ್ನು ಮೀರಿ ಹಿಂದೂಗಳೇ. ದೇಶದಲ್ಲಿ ನಾಲ್ಕು ರೀತಿಯ ಹಿಂದೂಗಳಿದ್ದಾರೆ. ಭಾರತದ ಎಲ್ಲ ಮುಸ್ಲಿಂ, ಕ್ರೖೆಸ್ತರ ಪೂರ್ವಜರೂ ಹಿಂದುಗಳೇ. ಇಂದಿಗೂ ಕೆಲವು ಕ್ರೖೆಸ್ತ, ಮುಸ್ಲಿಮರೂ ತಮ್ಮ ಗೋತ್ರವನ್ನು ಹೇಳುತ್ತಾರೆ. ಭಾರತದಲ್ಲಿ ಅಹಿಂದು ಎನ್ನುವವರು ಯಾರೂ ಇಲ್ಲ. ಇದು ಹಿಂದೂ ರಾಷ್ಟ್ರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನು ಎಲ್ಲರಿಗೂ ತಿಳಿಸುವುದು ಸಂಘದ ಕಾರ್ಯ. ಆರ್ಎಸ್ಎಸ್ ಎದುರಿಸಿದಷ್ಟು ಸಾಮಾಜಿಕ ಪ್ರತಿರೋಧವನ್ನು ಇಡೀ ಪ್ರಪಂಚದ ಇತಿಹಾಸದಲ್ಲಿ ಇನ್ನೊಂದು ಸಂಘಟನೆ ಎದುರಿಸಿಲ್ಲ. ಮೂರು ಬಾರಿ ನಿಷೇಧ, ಸ್ವಯಂಸೇವಕರ ಕೊಲೆ, ಯಾವುದಕ್ಕೂ ನಕಾರಾತ್ಮಕವಾಗಿ ಪ್ರತಿಕ್ರಿಯಿಸದೆ ಮುಂದುವರಿದಿದ್ದರಿಂದ ಸಂಘಟನೆ ಬೆಳೆದಿದೆ. ನಮಗೆ ಬೇಕಾದ ಕಾರ್ಯಕರ್ತರನ್ನು ಹೊರಗಿನಿಂದ ಪಡೆಯದೆ, ನಾವೇ ಸಿದ್ಧಪಡಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಸಂಘವು ತನ್ನ ಕಾರ್ಯಚಟುವಟಿಕೆಯಲ್ಲಿ ಸ್ವಾವಲಂಬಿಯಾಗಿದೆ.