

ಪಿರಿಯಾಪಟ್ಟಣ: ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಿದೆ ಎಂದು ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಎ.ಸಮೀವುಲ್ಲಾ ತಿಳಿಸಿದರು.
ಪಟ್ಟಣದ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಸವನಿಕೇತನ ಶಾಲಾ ಸಮೂಹಗಳ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾಲಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನದ ಆವಿಷ್ಕಾರ ಮತ್ತು ಹೊಸ ಕಾನೂನುಗಳನ್ನು ರೂಪಿಸಲಾಗುತ್ತಿದ್ದು ಅವುಗಳನ್ನು ಅರಿಯುವ ಗುಣ ಬೆಳೆಸಿಕೊಂಡು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಿಂದೆ ಶಿಕ್ಷಣ ಕಲಿಯುವ ವ್ಯವಸ್ಥೆ ಅತ್ಯಂತ ಕಷ್ಟಕರವಾಗಿತ್ತು, ಆದರೆ, ಇಂದು ಶಿಕ್ಷಣ ಎಂಬುದು ಎಲ್ಲರ ಕೈಗೆಟುಕುವಂತಹದಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ಬದಲಾವಣೆಗಳು, ಆವಿಷ್ಕಾರಗಳು ಆಗುತ್ತಿವೆ. ಈ ಬದಲಾವಣೆಗೆ ಎಲ್ಲರೂ ಸಿದ್ಧರಾಗಬೇಕು. ಆಗ ಮಾತ್ರ ನಮ್ಮ ಪ್ರಗತಿ ಸಾಧ್ಯ. ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್‌ಗಳು ತಂತ್ರಜ್ಞಾನದ ಫಲವಾಗಿವೆ ಎಂದರು.
ಜನರು ವಾಹನ ಖರೀದಿಸುವುದು ದೊಡ್ಡ ವಿಷಯವಲ್ಲ. ಅವುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವುದು ಅತ್ಯವಶ್ಯಕ. ಲಕ್ಷಾಂತರ ರೂ. ಖರ್ಚು ಮಾಡಿ ವಾಹನ ಖರೀದಿ ಮಾಡುವ ನಾವು ಕೆಲವೊಮ್ಮೆ ಸಾವಿರ ರೂ.ಕೊಟ್ಟು ವಿಮೆ ಮಾಡಿಸದೆ ಅಪಘಾತ ನಡೆದಾಗ ಪರಿಹಾರ ನೀಡುವ ಸಂದರ್ಭದಲ್ಲಿ ಕುಟುಂಬವನ್ನೇ ಬೀದಿಗೆ ತಂದಿರುವ ಉದಾಹರಣೆಗಳು ಸಾಕಷ್ಟಿವೆ. ಹೀಗಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಬಸವ ನಿಕೇತನ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಚ್.ಸಿ.ಬಸವರಾಜು ಮಾತನಾಡಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳು ಇತ್ತೀಚಿನ ದಿನದಲ್ಲಿ ಕಣ್ಮರೆಯಾಗುತ್ತಿದೆ. ಆ ಮೌಲ್ಯವನ್ನು ಬೆಳೆಸುವಂತಹ ಶಿಕ್ಷಣ ಇಂದಿನ ಸಮಾಜಕ್ಕೆ ಅಗತ್ಯವಿದೆ. ಶಿಕ್ಷಣ ಪಡೆಯುವುದು ಕೇವಲ ಉದ್ಯೋಗಕ್ಕಾಗಿ ಎಂಬ ಭಾವನೆ ಉಂಟಾಗಿದೆ. ಇದರಿಂದ ಕುಟುಂಬದಲ್ಲಿ ಹೊಂದಾಣಿಕೆ, ನೆಮ್ಮದಿಯ ಕೊರತೆ ಹೆಚ್ಚುತ್ತಿದೆ. ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂದರು.
ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಟಿ.ಸಿ.ವಸಂತರಾಜೇ ಅರಸ್, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿವಸ್ವಾಮಿ, ಖಜಾಂಚಿ ಮಂಜುನಾಥಸ್ವಾಮಿ, ನಿರ್ದೇಶಕರಾದ ಆರ್.ಎಸ್.ಕುಮಾರ ವಿಜಯ್, ಆದರ್ಶ ಪಟೇಲ್, ಪ್ರಸನ್ನ, ಸದಾಶಿವಯ್ಯ, ಆರ್.ಎಸ್.ವೀರಣ್ಣ, ಆರ್.ವಿ.ಗಣೇಶ್, ಸಹನಾ ಪ್ರಸನ್ನ, ಸಂಪನ್ಮೂಲ ವ್ಯಕ್ತಿ ರವಿಕುಮಾರ್, ಪ್ರಾಂಶುಪಾಲ ರುದ್ರೇಶ್, ಶಿಕ್ಷಕ ಲೋಕೇಶ್ ಉಪಸ್ಥಿತರಿದ್ದರು.