

| ಬೇಲೂರು ಹರೀಶ
ಬೆಂಗಳೂರು: ಹಾಲಿನಿಂದ ಹಿಡಿದು ತುಪ್ಪ, ಅಡುಗೆ ಎಣ್ಣೆ, ಚಾಕೊಲೇಟ್ ಸೇರಿ ಪ್ರತಿ ಆಹಾರವನ್ನೂ ಕಲಬೆರಕೆ ಮಾಡುವ ಜಾಲ ಸಕ್ರಿಯವಾಗಿರುವುದನ್ನು ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಪತ್ತೆಹಚ್ಚಿದೆ. ಹೋಮ್ೆುೕಡ್ ಚಾಕೊಲೇಟ್, ಮಾಂಸ, ಹಣ್ಣು, ತರಕಾರಿ, ಸಿರಿಧಾನ್ಯ, ಜಾಮ್ ಜೆಲ್ಲಿ, ಖಾದ್ಯಎಣ್ಣೆ, ಜೇನುತುಪ್ಪ, ಬೆಲ್ಲ, ಕಾಫಿ, ಟೀ ಪುಡಿ, ಮಸಾಲೆ ಪದಾರ್ಥ, ದ್ವಿದಳ ಧಾನ್ಯ, ಬೇಕರಿ ಉತ್ಪನ್ನ, ಸಿಹಿತಿಂಡಿ, ಪಾನೀಯದಲ್ಲೂ ಕಲಬೆರಕೆ ಅಂಶ ಪತ್ತೆಯಾಗಿದೆ. ಕೆಲ ಪದಾರ್ಥಗಳಲ್ಲಿ ಕಲಬೆರಕೆ ಹೇಗೆ, ಅದರಿಂದ ಆರೋಗ್ಯದ ಮೇಲಾಗುವ ಪರಿಣಾಮ ಏನು ಎಂಬ ವಿವರ ಇಲ್ಲಿದೆ.
ತುಪ್ಪ: ಕೆಲವು ತುಪ್ಪಗಳಲ್ಲಿ ವನಸ್ಪತಿ ಬೆರೆಸಲಾಗುತ್ತದೆ. ಕೆಲವೊಮ್ಮೆ ಪಾಮ್ ಆಯಿಲ್ನಂಥ ಎಣ್ಣೆಗಳನ್ನು ವನಸ್ಪತಿಗಳಲ್ಲಿ ಬೆರೆಸಿ ತುಪ್ಪದಂಥ ಸುಗಂಧಕಾರ(ಎಸೆನ್ಸ್) ಮಿಶ್ರ ಮಾಡುತ್ತಾರೆ. ಇಂಥ ಕಲಬೆರಕೆ ತುಪ್ಪ ಶುದ್ಧ ತುಪ್ಪಕ್ಕಿಂತಲೂ ಆಕರ್ಷಕವಾಗಿರುತ್ತದೆ. ದನ, ಎಮ್ಮೆ, ಹಂದಿ ಮುಂತಾದ ಪ್ರಾಣಿಗಳ ದೇಹದ ಕೊಬ್ಬನ್ನು ತುಪ್ಪದ ತಯಾರಿಕೆಗೆ ಯಥೇಚ್ಛ ಬಳಸುತ್ತಾರೆ. ಈ ಸಂಬಂಧ ಇಲಾಖೆ 37 ವಿವಿಧ ಮಾದರಿಯ ತುಪ್ಪ ಸಂಗ್ರಹಿಸಿದ್ದು, ಇದರಲ್ಲಿ 28 ಸುರಕ್ಷಿತ, 3 ಅಸುರಕ್ಷಿತ, 1 ಮಿಸ್ ಬ್ರಾ್ಯಂಡ್, 4 ಕಳಪೆ ಎಂದು ಆಹಾರ ಪ್ರಯೋಗಾಲಯದಲ್ಲಿ ದೃಢಪಟ್ಟಿದೆ.
ಹಾಲು: ಹಾಲಿಗೆ ನೀರು, ಸ್ಟಾರ್ಚ್, ಯೂರಿಯಾ, ಡಿಟರ್ಜೆಂಟ್, ಸಿಂಥೆಟಿಕ್ ಹಾಲು, ಗ್ಲೂಕೋಸ್, ವನಸ್ಪತಿ, ಅಮೋನಿಯಂ, ಸಲ್ಪೇಟ್, ಉಪು್ಪ, ಹೈಡ್ರೋಜನ್ಪೆರಾಕ್ಸೆ ೖಡ್, ಸಕ್ಕರೆ, ಸೋಡಿಯಂ ಬೈ ಕಾಬೋನೇಟ್, ಬೋರಿಕ್ ಆಸಿಡ್, ಪಾಮ್ ಎಣ್ಣೆ, ನೊರೆ ಬರಲು ಶಾಂಪೂ, ಸಕ್ಕರೆ ಸೇರಿಸುತ್ತಾರೆ. 2019ರ ಏಪ್ರಿಲ್ನಿಂದ 2020ರ ಫೆಬ್ರವರಿವರೆಗೆ ರಾಜ್ಯಾದ್ಯಂತ ಹಾಲು ಸರಬರಾಜು ಮಾಡುತ್ತಿರುವ ಸಂಸ್ಥೆಗಳಿಂದ 71 ಹಾಲಿನ ಮಾದರಿ ಸಂಗ್ರಹಿಸಿದ್ದು, ಇದರಲ್ಲಿ 1 ಅಸುರಕ್ಷಿತ 9 ಕಳಪೆ ಎಂದು ದೃಢಪಟ್ಟಿವೆ.
ಅಡುಗೆ ಎಣ್ಣೆ: 1 ಲೀ. ಶೇಂಗಾ ಎಣ್ಣೆ ಉತ್ಪಾದಿಸಲು ಅಂದಾಜು 300 ರೂ. ಖರ್ಚಾಗುತ್ತದೆ. ಆದರೆ, ಕೆಲ ಕಂಪನಿಗಳು ಕಡಿಮೆ ದರದ ಕಳಪೆ ಎಣ್ಣೆ ಹಾಗೂ ಪೆಟ್ರೋಲಿಯಂ ಮೂಲದ ಎಣ್ಣೆ, ಹಂದಿ ಮತ್ತು ನಾಯಿ ಕೊಬ್ಬಿನಿಂದ ತೆಗೆದ ಎಣ್ಣೆ, ರಾಸಾಯನಿಕ ಅಂಶಗಳನ್ನು ಹೊಂದಿರುವ ಮಿನರಲ್ ಆಯಿಲ್ ಹಾಗೂ ಇನ್ನಿತರ ಕೆಳದರ್ಜೆಯ ವಸ್ತುಗಳನ್ನು ಬೆರೆಸಿ ಮಾರುತ್ತವೆ. 2019ರ ಜನವರಿಯಿಂದ ಡಿಸೆಂಬರ್ವರೆಗೆ 359 ಎಣ್ಣೆ ಮಾದರಿಗಳ ಪೈಕಿ 16 ಕಳಪೆ, 7 ಮಿಸ್ ಬ್ರಾ್ಯಂಡ್ ಎಂದು ದೃಢಪಟ್ಟಿವೆ. ಇದುವರೆಗೆ 25 ಉದ್ದಿಮೆದಾರರ ಅಂದಾಜು 100 ಅಂಗಡಿಗಳಿಂದ 87 ಟನ್ ಕರಿದ ಎಣ್ಣೆ ಬಯೋಡಿಸೇಲ್ ಉತ್ಪಾದಕರಿಗೆ ನೀಡಲಾಗಿದೆ.
ಆಕರ್ಷಕವಾಗಿ ಕಾಣಿಸಲು ರಾಸಾಯನಿಕ: ಬಹುತೇಕ ಹೋಟೆಲ್ ಮತ್ತು ರಸ್ತೆಬದಿಯಲ್ಲಿ ಮಾರುವ ಆಹಾರ, ಸಿಹಿ, ಖಾರ ತಿನಿಸು ಮತ್ತು ಕರಿದ ಪದಾರ್ಥಗಳಲ್ಲೂ ರುಚಿ ಹೆಚ್ಚಿಸಲು, ಬಣ್ಣದಿಂದ ಆಕರ್ಷಿಸಲು ಹಾಗೂ ಹಣ್ಣು- ತರಕಾರಿಗಳನ್ನು ಆಕರ್ಷಕವಾಗಿ ಕಾಣಲು ಅಪಾಯಕಾರಿ ರಾಸಾಯನಿಕ ಬಳಸಲಾಗುತ್ತದೆ. ಅಂಥ ಆಹಾರ ಪದಾರ್ಥಗಳನ್ನು ಸೇವಿಸಿದರೆ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ.
10 ಲಕ್ಷ ರೂ. ದಂಡ, 7 ವರ್ಷ ಶಿಕ್ಷೆ: ಕಲಬೆರಕೆ ಮಾಡಿದರೆ 25 ಸಾವಿರದಿಂದ 10 ಲಕ್ಷ ರೂ. ವರೆಗೆ ದಂಡ ಹಾಗೂ 2 ತಿಂಗಳಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಆಗಲಿದೆ. ಆದರೆ, ಈವರೆಗೆ ಯಾರಿಗೂ ಜೈಲು ಶಿಕ್ಷೆ ಆಗಿಲ್ಲ.
ಸಂಭಾವ್ಯ ಕಾಯಿಲೆಗಳು: ಕಲಬೆರಕೆ ಆಹಾರ ಸೇವಿಸಿದರೆ ಮಧುಮೇಹ, ರಕ್ತದೊತ್ತಡ, ಬೊಜ್ಜು, ಹೃದಯಾಘಾತ, ಅಲರ್ಜಿ, ಕ್ಯಾನ್ಸರ್, ಚರ್ಮದ ಕಾಯಿಲೆಗಳು, ಗ್ಯಾಸ್ಟ್ರಿಕ್, ಮೆದುಳಿನ ಸಮಸ್ಯೆ, ಶ್ವಾಸಕೋಶ, ಕಿಡ್ನಿ, ಉದರ ಸಂಬಂಧಿ ಕಾಯಿಲೆ, ಅಲ್ಜೈಮರ್, ರ್ಪಾನ್ಸನ್ ಮತ್ತಿತರರ ಕಾಯಿಲೆಗಳು ಬರುತ್ತವೆ ಎನ್ನುತ್ತಾರೆ ವೈದ್ಯರು.
ಜಾಗೃತಿಗೆ ಹಲವು ಕಾರ್ಯಕ್ರಮ: ರಾಜ್ಯದಲ್ಲಿ ಈವರೆಗೆ 4,99,023 ಆಹಾರ ಉದ್ದಿಮೆಗಳಿಗೆ ಪರವಾನಗಿ ನೀಡಲಾಗಿದೆ. 13,05,825 ಆಹಾರ ಉದ್ದಿಮೆಗಳು ನೋಂದಣಿ ಮಾಡಿಕೊಂಡಿವೆ. ಆಹಾರ ಕಲಬೆರಕೆ ಜಾಗೃತಿ ಮೂಡಿಸಲು ‘ಪುಡ್ ಸೇಫ್ಟಿ ಆನ್ ವೀಲ್ಸ್’, ‘ಕ್ಲೀನ್ ಸ್ಟ್ರೀಟ್ ಪುಡ್ ಹಬ್’ ಹಾಗೂ ‘ಪುಡ್ ಪಾರ್ಟಿಫಿಕೇಷನ್’ ಮುಂತಾದ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ.
13,189 ಮಾದರಿ ಪರೀಕ್ಷೆ: 2016ರಲ್ಲಿ 2837, 2017-3257, 2018- 3945, 2019- 3150 ಸೇರಿ ಒಟ್ಟು 13,189 ವಿವಿಧ ಮಾದರಿಗಳ ಆಹಾರ ಪದಾರ್ಥ ಪರೀಕ್ಷಿಸಲಾಗಿದೆ. ಆ ಪೈಕಿ ಒಟ್ಟು 2,923 ಕಲಬೆರಕೆ, ಕಳಪೆ ಮತ್ತು ನಕಲಿ ಬ್ರಾ್ಯಂಡ್ ಪ್ರಕರಣಗಳು ಹಾಗೂ 597 ಸಾಮಾನ್ಯ ಪ್ರಕರಣಗಳು ದಾಖಲಾಗಿವೆ.