

ಕೆ.ಆರ್.ನಗರ: ವಿದ್ಯಾರ್ಥಿಗಳು ಪುಸ್ತಕಗಳ ಜತೆಗೆ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಂಡಾಗ ಮಾತ್ರ ಸಾಮಾನ್ಯ ಜ್ಞಾನ ವೃದ್ಧಿಸುತ್ತದೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ವಿಜೇತರ ಆಯ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪುಸ್ತಕದ ಜ್ಞಾನ ನಮ್ಮನ್ನು ನಾವು ಸದೃಢ ಮಾಡಿಕೊಳ್ಳಲು, ಜೀವನದಲ್ಲಿ ಸಾಧನೆ ಮಾಡಲು ಅಗತ್ಯ ಎಂದು ತಿಳಿಸಿದರು.
ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿ ಸಾಧನೆ ಮಾಡುತ್ತಿದ್ದು, ಇದಕ್ಕೆ ಅವರಲ್ಲಿರುವ ತಾಳ್ಮೆ ಮತ್ತು ಓದಿನ ಪರಿಶ್ರಮ ಕಾರಣವಾಗಿದೆ. ತಮ್ಮ ದಿನನಿತ್ಯದ ಕೆಲಸ, ಕಾರ್ಯಗಳ ನಡುವೆ ಅಂದಿನ ಕಾಲದ ನಿಯತಕಾಲಿಕೆಗಳಿಂದ ಪ್ರಾರಂಭಿಸಿ ಇಂದಿನ ದಿನಪತ್ರಿಕೆಗಳನ್ನೂ ಓದುತ್ತಿರುವವರಲ್ಲಿ ಮಹಿಳೆಯರೇ ಹೆಚ್ಚಾಗಿದ್ದಾರೆ. ಇಂತಹ ಓದುಗರ ಸಂಖ್ಯೆ ಮುಂದುವರಿಯಬೇಕು ಎಂಬ ಉದ್ದೇಶದಿಂದ ‘ವಿಜಯವಾಣಿ’ ಕೈಗೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಎಷ್ಟೇ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಿದರೂ ಪೂರ್ಣ ಮಾಹಿತಿ ಸಿಗುವುದಿಲ್ಲ. ಪತ್ರಿಕೆಗಳಲ್ಲಿ ದೇಶ, ವಿದೇಶಗಳ, ಎಲ್ಲ ಕ್ಷೇತ್ರಗಳ ಮಾಹಿತಿ ಸೇರಿದಂತೆ ಉಪಯುಕ್ತ ವಿಷಯಗಳಿವೆ. ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಎಲ್ಲರ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರತಿಯೊಂದು ಸೀರೆಯ ಹಿಂದೆ ಮಹಿಳೆಯರ ಭಾವನಾತ್ಮಕ ಸಂಬಂಧಗಳು ಇರುತ್ತವೆ. ಸೀರೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ನಮ್ಮ ಹೆಮ್ಮೆಯ ಪ್ರತೀಕವಾಗಿದೆ. ಯಾವುದೇ ಕಾರ್ಯಕ್ರಮಗಳಲ್ಲೂ ಮಹಿಳೆಯರು ಸೀರೆ ತೊಡುವ ಮೂಲಕ ತಮ್ಮ ಸಂಪ್ರದಾಯಗಳನ್ನು ಮುಂದುವರಿಸುತ್ತಾ ಬರುತ್ತಿರುವುದನ್ನು ನಾವು ಕಾಣುತ್ತೇವೆ ಎಂದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಕೆ.ಕೃಷ್ಣಯ್ಯ ಮಾತನಾಡಿ, ವಿಜಯವಾಣಿ ಪತ್ರಿಕೆಯ ಈ ಕಾರ್ಯಕ್ರಮ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದ್ದು ಅವರನ್ನು ಓದುವ ಹವ್ಯಾಸಕ್ಕೆ ಹೆಚ್ಚಾಗಿ ತೊಡಗಿಸುವಂತೆ ಮಾಡಿದೆ. ಪತ್ರಿಕೆಗಳಲ್ಲಿ ಇನ್ನು ಹೆಚ್ಚಾಗಿ ಸಾಮಾನ್ಯ ಜ್ಞಾನ ವೃದ್ಧಿಸುವಂತಹ ಮಾಹಿತಿಯನ್ನು ನೀಡಿದರೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗಲಿದೆ ಎಂದರು.
‘ವಿಜಯವಾಣಿ’ ಮೈಸೂರು ಬ್ಯೂರೋ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ನಾರಿ ನಿನಗೊಂದು ಸ್ಯಾರಿ ಲಕ್ಕಿ ಡ್ರಾನಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಐವರು ಅದೃಷ್ಟಶಾಲಿಗಳನ್ನು ಕೂಪನ್ ತೆಗೆಯುವ ಮೂಲಕ ಆಯ್ಕೆ ಮಾಡಿದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ನಿಕಟಪೂರ್ವ ಉಪಾಧ್ಯಕ್ಷೆ ಬಾನುಮತಿ ಹರೀಶ್, ಬಿಸಿಎಂ ಇಲಾಖೆಯ ವಸತಿ ನಿಲಯದ ನಿಲಯ ಪಾಲಕಿ ಸಿ.ಗೀತಾ, ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ದಾಕ್ಷಾಯಣಮ್ಮ, ಕನ್ನಡ ಉಪನ್ಯಾಸಕ ಎಂ.ಕೃಷ್ಣ ಮತ್ತಿತರರು ಹಾಜರಿದ್ದರು.
ಬಹುಮಾನಿತರು
ಪಟ್ಟಣದ ಮಧುವನಹಳ್ಳಿ ಬಡಾವಣೆಯ ಎ.ಸುಮನ್‌ರಾವ್, ತಾಲೂಕಿನ ಗೊರಗುಂಡಿ ಗ್ರಾಮದ ಬಿ.ಕೆ.ಕುಮಾರಿ, ಲಾಳಂದೇವನಹಳ್ಳಿ ಗ್ರಾಮದ ವಿ.ಪ್ರದ್ಮಶ್ರೀ, ಕಾಳೇನಹಳ್ಳಿ ಹೊಸಬಡಾವಣೆಯ ಎಂ.ಆರ್.ರಾಜೇಶ್ವರಿ, ಸಾಲಿಗ್ರಾಮ ತಾಲೂಕಿನ ನಮಾಜ್ ಬೋರೆಯ ನಿಶ್ಚಿತಾ ಶಂಕರ್.