ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

14NGD1
Published on

ನಂಜನಗೂಡು: ಸ್ವಾವಲಂಬಿ ಬದುಕಿಗಾಗಿ ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು, ಅದರಿಂದ ಸಣ್ಣ ರೈತರಿಗೆ ಆರ್ಥಿಕವಾಗಿ ಹೆಚ್ಚಿನ ನೆರವು ಲಭ್ಯವಾಗಲಿದೆ ಎಂದು ಐಐಟಿ ಮುಂಬೈ ಪ್ರಾಧ್ಯಾಪಕ ಡಾ.ಜೆ.ಆದಿನಾರಾಯಣ ಸಲಹೆ ನೀಡಿದರು.


ತಾಲೂಕಿನ ಸುತ್ತೂರು ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ರೈತರೊಡನೆ ಸಮಾಲೋಚನೆ ನಡೆಸಿ ಮಾತನಾಡಿದರು.


ರೈತರಿಗೆ ನೂತನ ತಂತ್ರಜ್ಞಾನದ ಬಗ್ಗೆ ಮಾಹಿತಿ ಹಾಗೂ ಸುಧಾರಿತ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ನೆರವಾಗುತ್ತಿರುವ ಜೆಎಸ್‌ಎಸ್ ಕೆವಿಕೆಯಿಂದ ಜಾನುವಾರುಗಳಿಗೆ ಮೇವಿನ ಬೆಳೆಗಳನ್ನು ಬೆಳೆಯಲು ಉಪಯುಕ್ತ ಮಾಹಿತಿ ಹಾಗೂ ರೇಷ್ಮೆ ಉತ್ಪಾದನೆಗೆ ನೆರವಾಗುವಂತೆ ಚಾಕಿ ಮರಿಗಳನ್ನು, ಚಾಕಿ ಸಾಕಣೆ ಘಟಕದಿಂದ ಒದಗಿಸುತ್ತಿರುವುದು ಹಾಗೂ ಅಗ್ರಿ ಕ್ಲಿನಿಕ್‌ನಿಂದ ರೈತರಿಗೆ ಉತ್ತಮ ಸಲಹೆ, ಮಾರ್ಗದರ್ಶನಗಳನ್ನು ನೀಡುವ ಜತೆಗೆ ಅಗತ್ಯ ಪರಿಕರಗಳನ್ನು ಒದಗಿಸುತ್ತಿರುವುದು ಅತ್ಯುತ್ತಮ ಸೇವಾ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಇದೇ ಸಂದರ್ಭ ಅವರು ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಾತ್ಯಕ್ಷಿಕಾ ಘಟಕಗಳಾದ ಸಮಗ್ರ ಕೃಷಿ ತಾಕು, ಗೋಶಾಲೆ, ಆಹಾರ ಉತ್ಪಾದನಾ ಘಟಕ, ಅಗ್ರಿ ಕ್ಲಿನಿಕ್, ಡ್ರಾಗನ್ ಹಣ್ಣಿನ ತಾಕು, ಎರೆಹುಳು ಗೊಬ್ಬರ ಉತ್ಪಾದನಾ ಘಟಕ, ನರ್ಸರಿ ಹಾಗೂ ಕೈತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.


ಜೆಎಸ್‌ಎಸ್ ಕೆವಿಕೆಯ ಹಿರಿಯ ವಿಜ್ಞಾನಿ ಎಚ್.ವಿ.ದಿವ್ಯಾ, ವಿಷಯ ತಜ್ಞರಾದ ಶಾಮರಾಜ್, ಡಾ.ವೈ.ಪಿ.ಪ್ರಸಾದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net