ಮಹಾಯುತಿ ಸಭೆ ಮುಂದೂಡಿಕೆ; ಮಹಾರಾಷ್ಟ್ರ ಸರ್ಕಾರ ರಚನೆ ಮತ್ತಷ್ಟು ವಿಳಂಬ

Mahayuthi
Published on

ಮುಂಬೈ: ಮಹಾರಾಷ್ಟ್ರದಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆಯುತ್ತಿದ್ದರೂ ಸರ್ಕಾರ ರಚನೆ ವಿಳಂಬವಾಗುತ್ತಲೇ ಇದೆ.ಗುರುವಾರ ತಡರಾತ್ರಿ ವರೆಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್, ಹಾಲಿ ಸಿಎಂ ಏಕನಾಥ ಶಿಂಧೆ ಇನ್ನಿತರ ನಾಯಕರು ಸರ್ಕಾರ ರಚನೆ ಬಗ್ಗೆ ದೆಹಲಿಯಲ್ಲಿ ಚರ್ಚೆ ನಡೆಸಿದ್ದರು. ಆದರೆ ನಂತರ ಯಾವುದೇ ನಿರ್ಧಾರ ಪ್ರಕಟ ಆಗಿಲ್ಲ. ಈ ನಡುವೆ, ಏಕನಾಥ ಶಿಂಧೆ ತಮ್ಮ ಸ್ವಗ್ರಾಮಕ್ಕೆ ದಿಢೀರ್ ತೆರಳಿರುವ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಮಹಾಯುತಿಯ ಪ್ರಮುಖ ಸಭೆಯನ್ನು ಮುಂದೂಡಲಾಗಿದೆ. ಭಾನುವಾರ ಸಭೆ ನಡೆಯಲಿರುವ ಸಾಧ್ಯತೆ ಇದ್ದು, ನಂತರ ನಿರ್ಧಾರ ಪ್ರಕಟವಾಗಲಿದೆ. ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ವೀಕ್ಷಕರ ಆಗಮನಕ್ಕಾಗಿ ಕಾಯುತ್ತಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಹೊಸ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮ ಮುಂದಿನ ವಾರ ನಡೆಯುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ರಚನೆಗೆ ಅಡ್ಡಿ ಇಲ್ಲ ಎಂದ ಶಿಂಧೆ

ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್ ಷಾ ಅವರೊಂದಿಗೆ ಸರ್ಕಾರ ರಚನೆ ಕುರಿತು ನಡೆದ ಮಾತುಕತೆ ಸಕಾರಾತ್ಮಕವಾಗಿದ್ದು, ಮುಂಬೈನಲ್ಲಿ ಮುಂದಿನ ಸುತ್ತಿನ ಚರ್ಚೆ ನಡೆಯಲಿದೆ ಎಂದು ಶಿಂಧೆ ಗುರುವಾರ ರಾತ್ರಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ, ಶುಕ್ರವಾರ ಮಹಾಯುತಿ ನಾಯಕರ ಸಭೆ ನಡೆದಿಲ್ಲ. ಈ ನಡುವೆ ಶಿಂಧೆ ದಕ್ಷಿಣ ಮುಂಬೈನಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ಪಕ್ಷದ ಮುಖಂಡರು, ಶಾಸಕರು, ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ. ಸರ್ಕಾರ ರಚನೆಗೆ ಅಡ್ಡಿಯಾಗುವುದಿಲ್ಲ. ಮುಂದಿನ ಸಿಎಂ ಬಗ್ಗೆ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧನಾಗಿರುತ್ತೇನೆ ಎಂದು ಪುನರುಚ್ಚರಿಸಿದ್ದಾರೆ.

ವಿಳಂಬ ಏಕೆ?

ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಮುಂದಿನ ಸರ್ಕಾರದಲ್ಲಿ ಶಿಂಧೆ ಸ್ಥಾನದ ಬಗ್ಗೆ ಶಿವಸೇನೆಯಲ್ಲಿ ಅಪಸ್ವರ ಆರಂಭವಾಗಿದೆ. ಸುಮಾರು ಎರಡೂವರೆ ವರ್ಷ ಸಿಎಂ ಆಗಿದ್ದ ಶಿಂಧೆ ಈಗ ಡಿಸಿಎಂ ಸ್ಥಾನವನ್ನು ಒಪ್ಪಿಕೊಳ್ಳುವುದು ಸರಿಯಲ್ಲ ಎಂದು ಶಿವಸೇನೆಯ ಒಂದು ಬಣ ಪಟ್ಟುಹಿಡಿದಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net