ಸಿಎಂ ವಿರುದ್ಧ ಕೇಸ್ ವಿಚಾರಣೆ ಮುಂದೂಡಿಕೆ

muda
Published on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ದಂಪತಿ ವಿರುದ್ಧದ ಮುಡಾ ಹಗರಣ ಆರೋಪ ಸಂಬಂಧದ ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದಿನ ವಾರಕ್ಕೆ ಮುಂದೂಡಿದೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದಾಖಲಿಸಿದ್ದ ಖಾಸಗಿ ದೂರಿನ ಅರ್ಜಿ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆ.20ಕ್ಕೆ ಕಾಯ್ದಿರಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಖಾಸಗಿ ಅರ್ಜಿ ವಿಚಾರಣೆಯನ್ನು ಆ.21ಕ್ಕೆ ಮುಂದೂಡಿದೆ.

ಮುಡಾದಲ್ಲಿ ಕಾನೂನು ಬಾಹಿರವಾಗಿ ನಿವೇಶನ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸುವಂತೆ ಸಲ್ಲಿಕೆಯಾಗಿದ್ದ 2 ಖಾಸಗಿ ದೂರಿನ ಅರ್ಜಿಗಳನ್ನು ಮಂಗಳವಾರ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ವಿಚಾರಣೆ ನಡೆಸಿದರು. ಟಿ.ಜೆ.ಅಬ್ರಹಾಂ, ಮೈಸೂರಿನ ಹೊರವಲಯದ ಕೆಸರೆ ಗ್ರಾಮ ಮತ್ತು ದೇವನೂರು ಗ್ರಾಮಗಳಲ್ಲಿ ನಡೆದಿರುವ ಹಗರಣದ ಬಗ್ಗೆ ಮಾಹಿತಿ ನೀಡಿದರು. ಕೆಸರೆ ಗ್ರಾಮದಲ್ಲಿ ದೇವನೂರು ಬಡವಾಣೆ ನಿರ್ಮಾಣ ಮಾಡಲಾಗಿದೆ. ಅಲ್ಲಿ ಜಮೀನು ಇಲ್ಲದಿದ್ದರೂ ದೇವರಾಜ್ ನಕಲಿ ದಾಖಲೆ ಸೃಷ್ಟಿಸಿ ಜಾಗವನ್ನು ಮಲ್ಲಿಕಾರ್ಜುನಗೆ ಮಾರಾಟ ಮಾಡಿದ್ದರು. ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ರೆವಿನ್ಯೂ ಲ್ಯಾಂಡ್ ಅನ್ನು ಕನ್ವರ್ಷನ್ ಮಾಡಲಾಗಿದೆ. 2010ರಲ್ಲಿ ಕಾನೂನು ಬಾಹಿರವಾಗಿ ದಾನ ಪತ್ರ ಮಾಡಲಾಗಿದೆ ಎಂದು ಆರೋಪಿಸಿದರು.

3ನೇ ಅರ್ಜಿ ವಜಾ

ಸಾಮಾಜಿಕ ಕಾರ್ಯಕರ್ತ ಅಲಂ ಪಾಷಾ, ಸಹ ನೇರವಾಗಿ ಕೋರ್ಟ್‌ನಲ್ಲಿ ಪಿಸಿಆರ್ ದಾಖಲಿಸಲು ಮುಂದಾದರು. ಈ ಸಂಬಂಧ ಅಸಮಧಾನ ವ್ಯಕ್ತಪಡಿಸಿದ ಕೋರ್ಟ್, ದೂರು ದಾಖಲಿಸುವ ವಿಧಾನ ಇದಲ್ಲ. ಸುಖಾಸುಮ್ಮನೆ ಕೋರ್ಟ್ ಸಮಯ ವ್ಯರ್ಥ ಮಾಡಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿಯನ್ನು ವಜಾ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net