

ಎಚ್.ಡಿ.ಕೋಟೆ: ಬುಡಕಟ್ಟು ಜನರ ಪುನರ್ವಸತಿಗೆ ರಚಿಸಿದ್ದ ಪ್ರೊ.ಮುಜಾಫರ್ ಅಸ್ಸಾದಿ ಸಮಿತಿ ನೀಡಿರುವ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕು ಒಡೆಯನ ಸಂಘಗಳ ಒಕ್ಕೂಟ ಮತ್ತು ಬುಡಕಟ್ಟು ಕೃಷಿಕರ ಸಂಘದಿಂದ ಗುರುವಾರ ಪಟ್ಟಣದ ತಾಲೂಕು ಆಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಯಿತು.
ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಒಟ್ಟು 120 ಹಾಡಿಗಳಲ್ಲಿ ಜೇನು ಕುರುಬ, ಬೆಟ್ಟ ಕುರುಬ, ಸೋಲಿಗ, ಬಡಿಗಿಯೆರವ, ಪಂಜರಿಯೆರವ, ಪಣಿಯೆರವ, ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ ಆದಿವಾಸಿಗಳು ವಾಸಿಸುತ್ತಿದ್ದು ಇಂದಿಗೂ ವಾಸದ ಮನೆ, ಕುಡಿಯುವ ನೀರು, ಸಮುದಾಯ ಭವನ, ಅಂಗನವಾಡಿ ಕೇಂದ್ರ, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಇಲ್ಲದೆ ಜನರು ನಿಕೃಷ್ಟ ಬದುಕು ಸಾಗಿಸುತ್ತಿದ್ದಾರೆ. ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಿ.ಬಿ.ಕುಪ್ಪೆ, ಎನ್.ಬೆಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹದಿಮೂರು ಹಾಡಿಗಳಲ್ಲಿ ಜನರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಗಳಾದರೂ ಇಂದಿಗೂ ಹಕ್ಕುಪತ್ರ ನೀಡಿಲ್ಲ. ಕೇವಲ ಮನೆ ಆಸುಪಾಸಿನ ಒಂದು ಅಥವಾ ಎರಡು ಗುಂಟೆ ಜಾಗಕ್ಕೆ ಹಕ್ಕುಪತ್ರಗಳನ್ನು ವಿತರಿಸಿ ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ತಾಲೂಕು ಒಡೆಯನ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ತಮಣ್ಣ ಮಾತನಾಡಿ, ನಮಗೆ ಮನೆ ಬೇಡ, ಪೌಷ್ಟಿಕ ಆಹಾರ ಬೇಡ, ರಸ್ತೆ ಬೇಡ. ಇತರರಂತೆ ಬದುಕಲು ಭೂಮಿ ನೀಡಿ, ಇಲ್ಲ ಕಾಡು ಕೊಡಿ. ಆದಿವಾಸಿ ಮಕ್ಕಳು ಶಿಕ್ಷಣ ಪಡೆದು ಹಾಡಿಗಳಲ್ಲಿ ನಿರುದ್ಯೋಗಿಗಳಾಗಿ ಅಲೆದಾಡುತ್ತಿದ್ದಾರೆ. ಪ್ರೊ.ಮುಜಾಫರ್ ಅಸ್ಸಾದಿ ವರದಿಯನ್ನು ಜಾರಿ ಮಾಡದೆ ಅಧಿಕಾರಿಗಳು ಆದಿವಾಸಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ನಮ್ಮ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು ಅವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇವೆ ಎಂದು ಎಚ್ಚರಿಸಿದರು.
ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಆದಿವಾಸಿಗಳಿಗೆ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ, ಮೈಸೂರು ಜಿಲ್ಲೆಯ ಆದಿವಾಸಿಗಳಿಗೆ ನೀಡಿಲ್ಲ. ತಾಲೂಕಿನಲ್ಲಿ 416 ಅರ್ಜಿಗಳು ಬಾಕಿ ಇದ್ದು ಈ ಕೂಡಲೇ ಸರ್ವೇ ನಡೆಸಿ ವೈಯಕ್ತಿಕ ಭೂಮಿ ಹಕ್ಕು ಪತ್ರಗಳನ್ನು ನೀಡಬೇಕು. ಭೀಮನಳ್ಳಿ ಹಾಡಿ, ಕುಂಟೇರಿಹಾಡಿ, ಮಜ್ಜನಕುಪ್ಪೆ ಹಾಡಿ ಮತ್ತು ಮಹದೇಶ್ವರ ಕಾಲನಿಯ ನಾಲ್ಕು ಹಾಡಿಗಳ ಜಮ್ಮಾ ಕಾಡಿನ ಪಾಳೆಯನ್ನು ಜಿಪಿಎಸ್ ಸರ್ವೇ ನಡೆಸಲು ದಿನಾಂಕ ನಿಗದಿಪಡಿಸಬೇಕು. ಆದಿವಾಸಿ ಕುಟುಂಬಗಳಿಗೆ ಪ್ರತ್ಯೇಕವಾಗಿ ತಲಾ 15 ಲಕ್ಷ ರೂ.ಪ್ಯಾಕೇಜ್ ಘೋಷಿಸಿ ಕುಟುಂಬದ ಹೆಸರಿನಲ್ಲಿ ಜಂಟಿ ಖಾತೆ ತೆರೆದು ಠೇವಣಿ ಇಡಬೇಕು. ಎಲ್ಲ ಬೇಡಿಕೆಗಳನ್ನು 15ದಿನದೊಳಗೆ ಈಡೇರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುಮಿತ್ರಾ, ಕಾಳಮ್ಮ, ಸರೋಜಾ, ಮಂಜುಳಾ, ಚಂದ್ರಮ್ಮ, ರಾಜ್, ಮೀನಾ, ಕಲಾ, ಸುಮತಿ, ಚೌಡಳ್ಳಿ ಜವರಯ್ಯ, ಸಣ್ಣಕುಮಾರ್, ಜಿ.ಜಿ ಕಾಲನಿ ರವಿ, ಕಾಳಪ್ಪಾಜಿ, ಆನಂದ, ಮಹೇಶ, ಕುಮಾರ, ರಾಜಪ್ಪ ಇದ್ದರು.