ಪಶ್ಚಿಮ ಬಂಗಾಳ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಅಧೀರ್ ರಂಜನ್ ಚೌಧರಿ ರಾಜೀನಾಮೆ!

adhir
Published on

ಕೋಲ್ಕತ್ತಾ: ಪಶ್ಚಿಮ ಬಂಗಾಳ ಕಾಂಗ್ರೆಸ್‌ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಬಾರಿ ಅಧೀರ್ ರಂಜನ್ ಲೋಕಸಭೆ ಚುನಾವಣೆಯಲ್ಲಿ ಬಹರಂಪುರದಲ್ಲಿ ಸೋಲನ್ನು ಅನುಭವಿಸಿದ್ದರು. ಅದರ ನಂತರ, ಅಧೀರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಅಧೀರ್ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೂಲಗಳ ಪ್ರಕಾರ, ಅಧೀರ್ ರಂಜನ್ ಚೌಧರಿ ಅವರು ಕೆಲವು ದಿನಗಳ ಹಿಂದೆಯೇ ತಮ್ಮ ರಾಜೀನಾಮೆ ಪತ್ರವನ್ನು ಹೈಕಮಾಂಡ್‌ಗೆ ಕಳುಹಿಸಿದ್ದಾರೆ. ಹೈಕಮಾಂಡ್ ಆ ರಾಜೀನಾಮೆ ಪತ್ರವನ್ನು ಅಂಗೀಕರಿಸಲಾಗಿದೆ ಎಂದು ಕೂಡ ಹೇಳಲಾಗುತ್ತಿದೆ.

ಅಧೀರ್ ರಂಜನ್ ಅಧೀರ್ ರಾಜೀನಾಮೆ ನೀಡಿದ್ದೇಕೆ? ಅಥವಾ ಅಧೀರ್ ಸೋತ ನಂತರ ಕಾಂಗ್ರೆಸ್ ಈ ರಾಜೀನಾಮೆ ಪತ್ರವನ್ನು ಕೇಳಿ ಪಡೆಯಿತಾ? ಬಂಗಾಳದಲ್ಲಿ ತನ್ನಿಂದಾಗಿಯೇ ಕುಸಿದು ಬಿದ್ದಿರುವ ಕಾಂಗ್ರೆಸ್ ಮುಂದೆ ಸಾಗಲು ಸಾಧ್ಯವಿಲ್ಲ ಎಂಬುದು ಅಧೀರನಿಗೆ ಅರಿವಾಗಿದೆಯೇ? ಈ ಬಗ್ಗೆ ಕಾಂಗ್ರೆಸ್ ಆಗಲೀ ಅಥವಾ ಅಧೀರ್ ರಂಜನ್ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇಂದು ಕೊಲ್ಕತ್ತಾದಲ್ಲಿ ಕಾಂಗ್ರೆಸ್‌ನ ಪ್ರಾಂತೀಯ ಸಭೆ ನಡೆಯಿತು. ಈ ಸಭೆಯ ನಂತರ, ಅಧೀರ್ ರಂಜನ್ ಮಾತನಾಡಿ, ನಾನು ಬಂಗಾಳದ ಪ್ರದೇಶ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ. ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾದ ದಿನದಿಂದಲೂ ದೇಶದಲ್ಲಿ ಎಲ್ಲೂ ಅಧ್ಯಕ್ಷರೇ ಇರಲಿಲ್ಲ. ಎಲ್ಲರೂ ಹಂಗಾಮಿ ಅಧ್ಯಕ್ಷರಷ್ಟೇ. ನಾನು ಕೂಡ ಹಂಗಾಮಿ ಅಧ್ಯಕ್ಷ ಮಾತ್ರ. ಹೊಸ ನೇಮಕಾತಿ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ ಎಂದು ಹೇಳಿದ್ದರು.

ಪಶ್ಚಿಮ ಬಂಗಾಳದಿಂದ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಸಂಸದ ಇಶಾ ಖಾನ್ ಚೌಧರಿ ಅವರು ಪಶ್ಚಿಮ ಬಂಗಾಳದ ಹೊಸ ಪ್ರಾಂತೀಯ ಅಧ್ಯಕ್ಷರಾಗುವ ರೇಸ್‌ನಲ್ಲಿದ್ದಾರೆ. ಇದಲ್ಲದೆ, ಪ್ರದೀಪ್ ಭಟ್ಟಾಚಾರ್ಯ ಮತ್ತು ಅಬ್ದುಲ್ ಮನ್ನನ್ ಕೂಡ ಹೊಸ ಪ್ರಾಂತೀಯ ಅಧ್ಯಕ್ಷರಾಗುವ ರೇಸ್‌ನಲ್ಲಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ಮುರ್ಷಿದಾಬಾದ್‌ನ ಬಹರಂಪುರ ಕ್ಷೇತ್ರದಿಂದ ಐದು ಬಾರಿ ಪಕ್ಷದ ಲೋಕಸಭಾ ಸಂಸದರಾಗಿರುವ ಅಧೀರ್ ಚೌಧರಿ ಅವರು ತೃಣಮೂಲ ಕಾಂಗ್ರೆಸ್‌ನ ಅಭ್ಯರ್ಥಿ ಯೂಸುಫ್ ಪಠಾಣ್ ವಿರುದ್ಧ ಸುಮಾರು 85,022 ಮತಗಳಿಂದ ಸೋತಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ತಿಳಿಸಿವೆ. ಅಧೀರ್ ಚೌಧರಿ 4,39,494 ಮತಗಳನ್ನು ಪಡೆದರೆ, ಯೂಸುಫ್ ಪಠಾಣ್ 5,24,516 ಮತಗಳನ್ನು ಪಡೆದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 42 ಸ್ಥಾನಗಳಿವೆ. ಕಳೆದ ಬಾರಿ ಅಲ್ಲಿ ಆಡಳಿತಾರೂಢ ಟಿಎಂಸಿ 22 ಸ್ಥಾನಗಳನ್ನು ಗೆದ್ದಿದ್ದರೆ ಬಿಜೆಪಿ 18 ಹಾಗೂ ಕಾಂಗ್ರೆಸ್ 2 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಆದರೆ, ಈಬಾರಿ ಮಧ್ಯಾಹ್ನದವರೆಗೆ ನಡೆದಿರುವ ಮತ ಎಣಿಕೆಯ ನಂತರ 18 ಕ್ಷೇತ್ರಗಳಲ್ಲಿ ಬಿಜೆಪಿ ಲೀಡಿಂಗ್ ನಲ್ಲಿದ್ದರೆ, ಟಿಎಂಸಿ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net