ತಮಿಳುನಾಡು ಕಳ್ಳಬಟ್ಟಿ ದುರಂತ: ಸಾವಿನ ಸಂಖ್ಯೆ 47ಕ್ಕೆ ಏರಿಕೆ, ಇನ್ನೂ ಹೆಚ್ಚಾಗುವ ಸಾಧ್ಯತೆ!

tn
Published on

ಚೆನ್ನೈ: ಕಳ್ಳಕುರಿಚಿ ಜಿಲ್ಲೆಯಲ್ಲಿ ಬುಧವಾರ ಕಳ್ಳಬಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ ಎಂದು ತಮಿಳುನಾಡಿನ ಸರ್ಕಾರ ತಿಳಿಸಿದೆ.

ಗುರುವಾರದವರೆಗೆ ಸಾವನ್ನಪ್ಪಿದ 29 ಜನರ ಪಾರ್ಥಿವ ಶರೀರವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಎಂದು ಕಲ್ಲಕುರಿಚ್ಚಿ ಜಿಲ್ಲಾಧಿಕಾರಿ ಪ್ರಶಾಂತ್ ಎಂ.ಎಸ್​. ತಿಳಿಸಿದ್ದಾರೆ.

ಘಟನೆ ಬಳಿಕ ಒಟ್ಟು 165 ಜನರನ್ನು ಚಿಕಿತ್ಸೆಗಾಗಿ ಕಲ್ಲಕುರಿಚಿ, ಜಿಪ್ಮರ್​, ಸೇಲಂ ಮತ್ತು ಮುಂಡಿಯಂಬಕ್ಕಂ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿತ್ತು.

ಅವರಲ್ಲಿ ಕಲ್ಲಕುರಿಚಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 25, ಸೇಲಂನ ಸರ್ಕಾರಿ ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 16, ವಿಲ್ಲುಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಾಲ್ವರು ಮತ್ತು ಪುದುಚೇರಿಯ ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ (ಜಿಪ್ಮರ್) ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ 118 ಮಂದಿಯಲ್ಲಿ 30 ಜನರ ಸ್ಥಿತಿ ಗಂಭೀರವಾಗಿದೆ. ಮೂವರು ಚೇತರಿಸಿಕೊಂಡಿದ್ದಾರೆ.

10 ಲಕ್ಷ ರೂಪಾಯಿ ಪರಿಹಾರ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬಹುದು. ಮೃತರ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂಪಾಯಿ, ಚಿಕಿತ್ಸೆ ಪಡೆಯುತ್ತಿರುವವರಿಗೆ 50 ರೂಪಾಯಿ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ತಿಳಿಸಿದ್ದಾರೆ.

ಸಿಐಡಿ ತನಿಖೆಗೆ ಆದೇಶ: ಕಳ್ಳಬಟ್ಟಿ ದುರಂತವು ದೇಶಾದ್ಯಂತ ಸುದ್ದಿಯಾಗಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಲೇ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಪ್ರಕರಣದ ತನಿಖೆಯನ್ನು ಸಿಬಿ-ಸಿಐಡಿಗೆ ವಹಿಸಿದ್ದಾರೆ. ಅಷ್ಟೇ ಅಲ್ಲ, ಕಳ್ಳಕುರಿಚಿ ಜಿಲ್ಲಾಧಿಕಾರಿ ಶ್ರವಣ್‌ಕುಮಾರ್‌ ಜಟಾವಥ್‌ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಎಂ.ಎಸ್.ಪ್ರಶಾಂತ್‌ ಅವರನ್ನು ಕಳ್ಳಕುರಿಚಿ ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ಹಾಗೆಯೇ, ರಾಜ್ಯದಲ್ಲಿ ಯಾವುದೇ ಭಾಗದಲ್ಲೂ ಕಳ್ಳಬಟ್ಟಿ ಕಾಣಿಸಕೂಡದು ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳ್ಳಬಟ್ಟಿ ಪ್ರಕರಣವು ಸುದ್ದಿಯಾಗುತ್ತಲೇ ಕಳ್ಳಬಟ್ಟಿ ದಂಧೆಯಲ್ಲಿ ತೊಡಗಿದ್ದ, ಗ್ರಾಮೀಣ ಭಾಗದ ಜನರಿಗೆ ಕಳ್ಳಬಟ್ಟಿಯನ್ನು ಪ್ಯಾಕೆಟ್‌ಗಳಲ್ಲಿ ತುಂಬಿ ಸರಬರಾಜು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 200 ಲೀಟರ್‌ ಕಳ್ಳಬಟ್ಟಿಯನ್ನೂ ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ, ಕಳ್ಳಕುರಿಚಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಮಯಸಿಂಗ್‌ ಮೀನಾ ಸೇರಿ ಒಟ್ಟು 10 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net