ಸ್ಯಾಂಟ್ರೋ ರವಿಯನ್ನ ಬಂಧಿಸುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?

santro ravi
Published on

ಮೈಸೂರು: ಪತ್ನಿಗೆ ವಂಚನೆ, ಅತ್ಯಾಚಾರ, ವೇಶ್ಯಾವಾಟಿಕೆ ದಂಧೆ, ಪೊಲೀಸ್​ ಅಧಿಕಾರಿಗಳ ವರ್ಗಾವಣೆ ದಂಧೆಯ ಕಿಂಗ್ ಪಿನ್ ಸ್ಯಾಂಟ್ರೋ ರವಿ ಅಲಿಯಾಸ್​ ಮಂಜುನಾಥ್​ ಕೊನೆಗೂ ಕರ್ನಾಟಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೈಸೂರಿನ ಯುವತಿಯೊಬ್ಬಳು ಈತನ ವಿರುದ್ಧ ದೂರು ನೀಡಿದ್ದರಿಂದ ಜ.4ರಂದು ಎಫ್​ಐಆರ್​ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ, ಬರೋಬ್ಬರಿ 10 ದಿನಗಳ ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ. ಈತನನ್ನ ಬಂಧಿಸದೆ ಬಿಡೋದಿಲ್ಲ ಎಂದು ಶಪಥ ಮಾಡಿದ್ದ ಎಡಿಜಿಪಿ ಅಲೋಕ್ ಕುಮಾರ್ ಅವರು ಮೈಸೂರು, ಮಂಡ್ಯ, ರಾಮನಗರ ಎಸ್​ಪಿ ಅವರನ್ನೊಳಗೊಂಡ ವಿಶೇಷ ತಂಡಗಳನ್ನ ರಚಿಸಿ ಬಂಧನಕ್ಕೆ ಬಲೆ ಬೀಸಿದ್ದರು. ಇಂದು(ಜ.13) ಗುಜರಾತ್​ನಲ್ಲಿ ಮೈಸೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಸ್ಯಾಂಟ್ರೋ ರವಿ ಸಿಕ್ಕಿಬೀಳುತ್ತಿದ್ದಂತೆ ಮೈಸೂರಿನ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅಲೋಕ್​ ಕುಮಾರ್​, ಗುಜರಾತ್​ನ ಅಹಮದಾಬಾದ್​ನಲ್ಲಿ ಆರೋಪಿಯನ್ನ ಗುಜರಾತ್ ಪೊಲೀಸರ ಸಹಾಯದೊಂದಿಗೆ ಬಂಧಿಸಲಾಗಿದೆ. ಬೆಂಗಳೂರಿಂದ ಸ್ಯಾಂಟ್ರೋ ರವಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾನೆ. ಮೊದಲಿಗೆ ಈತ ತೆಲಂಗಾಣ, ಕೇರಳದಲ್ಲಿ ಇರುವ ಬಗ್ಗೆ ಮಾಹಿತಿ ಸಿಕಿತ್ತು. ಈತನ ಬಂಧನ ಕಾರ್ಯಾಚರಣೆಯಲ್ಲಿ ರಾಯಚೂರು, ರಾಮನಗರ, ಮಂಡ್ಯ ಎಸ್ಪಿ ಸೇರಿದಂತೆ 11 ಅಧಿಕಾರಿಗಳು ಸಾಕಷ್ಟು ಶ್ರಮ ಹಾಕಿದ್ದಾರೆ. ಗುಜರಾತ್ ಕೋರ್ಟ್​ಗೆ ಇಂದು ಆರೋಪಿಯನ್ನ ಹಾಜರು ಪಡಿಸಿ, ನಾಳೆ(ಶನಿವಾರ) ಮೈಸೂರು ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗುವುದು ಎಂದು ವಿವರಿಸಿದರು.

ಸ್ಯಾಂಟ್ರೋ ರವಿ ವಿರುದ್ಧ 2005ರಲ್ಲೇ ವಿರುದ್ಧ ಗೂಂಡಾ ಕಾಯ್ದೆ ಜಾರಿಯಾಗಿತ್ತು. 28 ಕೇಸ್​ಗಳು ಪೆಂಡಿಂಗ್ ಇವೆ. ಬೆಂಗಳೂರಿನ ಆರ್​.ಆರ್. ನಗರದ ಮನೆ ಹಾಗೂ ಮೈಸೂರಿನ ದಟ್ಟಗಳ್ಳಿಯಲ್ಲಿ ಸರ್ಚ್ ಮಾಡಲಾಗಿದೆ. ಕೆಲ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net