

ನವದೆಹಲಿ: ಕಾರ್ವಿುಕರು ನಿವೃತ್ತಿಯ ನಂತರ ಅಧಿಕ ಪಿಂಚಣಿ ಪಡೆಯುವಂತಹ ಯೋಜನೆಯ ಮಾರ್ಗಸೂಚಿಯನ್ನು ಕಾರ್ವಿುಕರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ) ಬಿಡುಗಡೆ ಮಾಡಿದೆ. 2014ರ ಕಾರ್ವಿುಕರ ಪಿಂಚಣಿ (ತಿದ್ದುಪಡಿ) ಯೋಜನೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್, 2022ರ ನವೆಂಬರ್ 4ರಂದು ತೀರ್ಪು ನೀಡಿ; ಈ ಯೋಜನೆಗೆ ಸೇರುವ ಬಗ್ಗೆ ಕಾರ್ವಿುಕರು ನಾಲ್ಕು ತಿಂಗಳೊಳಗೆ ತೀರ್ವನಿಸಬೇಕು ಎಂದು ಹೇಳಿತ್ತು. ಈ ಗಡುವಿಗೂ 12 ದಿನ ಮೊದಲು ಇಪಿಎಫ್ಒ ಮಾರ್ಗಸೂಚಿಯನ್ನು ಪ್ರಕಟಿಸಿದೆ.
2014ರ ಸೆಪ್ಟೆಂಬರ್ನಲ್ಲಿ ಇಪಿಎಸ್ ಕಾಯ್ದೆಗೆ ಮಾಡಿದ ತಿದ್ದುಪಡಿ ಪ್ರಕಾರ, ಪಿಂಚಣಿಗೆ ಅರ್ಹವಾಗುವ ಗರಿಷ್ಠ ಮೊತ್ತ ವೇತನವನ್ನು 6,500ರಿಂದ 15,000 ರೂ.ಗೆ ಏರಿಸಲಾಯಿತು. ಉದ್ಯೋಗದಾತರ ವಂತಿಗೆಯಲ್ಲಿ ಶೇ. 8.33 ಪಿಂಚಣಿ ಕಾರ್ಪಸ್ ನಿಧಿಗೆ ವರ್ಗಾಯಿಸಬೇಕು ಎಂದು ಹೇಳಲಾಯಿತು. ಸೆಪ್ಟೆಂಬರ್ 1ರಿಂದ ಅನ್ವಯವಾಗುವಂತೆ ಆರು ತಿಂಗಳೊಳಗೆ ಹೊಸ ಯೋಜನೆಗೆ ಕಾರ್ವಿುಕರು ಪರಿವರ್ತನೆ ಪಡೆಯಬಹುದು ಎಂದು ಸೂಚಿಸಲಾಯಿತು. ವಿಶೇಷ ಸಂದರ್ಭದಲ್ಲಿ ಇಪಿಎಫ್ಒ ಪ್ರಾದೇಶಿಕ ಆಯುಕ್ತರಿಗೆ ಇದನ್ನು ಇನ್ನಾರು ತಿಂಗಳು ವಿಸ್ತರಿಸಲು ಅಧಿಕಾರ ನೀಡಲಾಯಿತು.
ವಾಯ್ದೆಯೊಳಗೆ ಆಯ್ಕೆ ಮಾಡಕೊಳ್ಳದಿದ್ದಲ್ಲಿ ಅಂತಹ ಚಂದಾದಾರರನ್ನು ‘ಆಯ್ಕೆ ಮಾಡಕೊಳ್ಳದವರು’ ಎಂದು ಸ್ವಾಭಾವಿಕವಾಗಿಯೇ ಭಾವಿಸಲಾಗುತ್ತದೆ ಎಂಬ ಷರಾ ಇತ್ತು. ಮೇಲೆ ಉಲ್ಲೇಖಿಸಿದ ಮೂಲವೇತನದ ಮಿತಿಗೂ ಹೆಚ್ಚಿನ ವೇತನ ಪಡೆಯುವ ಚಂದಾದಾರರು ಹೆಚ್ಚುವರಿಯಾಗಿ ಶೇ. 1.16ರಷ್ಟು ವಂತಿಗೆಯನ್ನು ಪಿಂಚಣಿ ನಿಧಿಗೆ ಪಾವತಿಸಬೇಕು ಎಂಬ ನಿಯಮವೂ ಈ ತಿದ್ದುಪಡಿಯಲ್ಲಿತ್ತು. ಆದರೆ, ಆಯ್ಕೆ ನೀಡಿದ ಗಡುವಿನ ಬಗ್ಗೆ ಮಾಹಿತಿ ಕೊರತೆಯಿಂದ ಅನೇಕರು ಹೊಸ ಯೋಜನೆಗೆ ಸೇರ್ಪಡೆಯಾಗಲು ಆಗಿಲ್ಲ. ಆದ್ದರಿಂದ ಇದನ್ನು ವಿಸ್ತರಿಸಬೇಕು ಎಂದು 54 ಅರ್ಜಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಕೆ ಆಗಿದ್ದವು.