ಅಧಿಕಾರಿಗಳಿಗಿಂತ ಕಡಿಮೆ ವೇತನ ಪಡೆದ ಅದಾನಿ

Untitled-design-6-6
Published on

ಮುಂಬೈ: ದೇಶದ ಖ್ಯಾತ ಉದ್ಯಮಿ ಹಾಗೂ ಅದಾನಿ ಗ್ರೂಪ್ಸ್​ನ ಮುಖ್ಯಸ್ಥ ಗೌತಮ್ ಅದಾನಿ 2023-24ನೇ ಹಣಕಾಸು ವರ್ಷದಲ್ಲಿ ತಮ್ಮ ಕಂಪನಿಯ ಹಿರಿಯ ಅಧಿಕಾರಿಗಳಿಗಿಂತ ಕಡಿಮೆ ವೇತನ ಪಡೆದಿದ್ದಾರೆ ಮತ್ತು 10 ಕಂಪನಿಗಳ ಪೈಕಿ ಬರೀ 2 ಕಂಪನಿಗಳಿಂದ ಮಾತ್ರ ಅವರಿಗೆ ಸಂಬಳ ಸಂದಾಯವಾಗಿದೆ. ಅದಾನಿ ಗ್ರೂಪ್ ಬಿಡುಗಡೆಗೊಳಿಸಿರುವ ವಾರ್ಷಿಕ ವರದಿಯಲ್ಲಿ ಈ ಸಂಗತಿ ಪ್ರಸ್ತಾಪಿಸಲಾಗಿದ್ದು, 2023-24ನೇ ಹಣಕಾಸು ವರ್ಷದಲ್ಲಿ ಗೌತಮ್ ಅದಾನಿ ಪಡೆದುಕೊಂಡಿರುವ ಒಟ್ಟು ಸಂಬಳ 9.26 ಕೋಟಿ ರೂ. ಅದಾನಿ ಎಂಟರ್​ಪ್ರೖೆಸಸ್ ಲಿಮಿಟೆಡ್​ನಿಂದ 2.19 ಕೋಟಿ ರೂ. ಸಂಬಳ ಹಾಗೂ 27 ಲಕ್ಷ ರೂ. ಭತ್ಯೆ, ಅದಾನಿ ಪೋರ್ಟ್ಸ್ ಆಂಡ್ ಎಸ್​ಇಜೆಡ್ ಲಿಮಿಟೆಡ್​ನಿಂದ 1.8 ಕೋಟಿ ರೂ. ವೇತನ ಮತ್ತು 5 ಕೋಟಿ ರೂ.ಗಳ ಲಾಭಾಂಶ ಪಡೆದಿದ್ದಾರೆ. ಗೌತಮ್ ಅದಾನಿ ಪ್ರಸ್ತುತ ವಿಶ್ವದ 14ನೇ ಸಿರಿವಂತ ವ್ಯಕ್ತಿಯಾಗಿದ್ದಾರೆ. ಮತ್ತೊಂದೆಡೆ, ಅದಾನಿ ಎಂಟರ್​ಪ್ರೖೆಸಸ್ ಲಿಮಿಟೆಡ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ನಿರ್ದೇಶಕ ವಿನಯ್ ಪ್ರಕಾಶ್ ಅವರಿಗೆ 89.37 ಕೋಟಿ ರೂ. ಸಂಬಳ ರೂಪದಲ್ಲಿ ನೀಡಲಾಗಿದೆ. ಗ್ರೂಪ್​ನ ಮುಖ್ಯ ಹಣಕಾಸು ಅಧಿಕಾರಿ ಜುಗೆಶಿಂದರ್ ಸಿಂಗ್ ವಾರ್ಷಿಕ 9.45 ಕೋಟಿ ರೂ. ವೇತನ ಪಡೆದುಕೊಂಡಿದ್ದಾರೆ. ಅದಾನಿ ಗ್ರೀನ್ ಎನಿರ್ಜಿ ಲಿಮಿಟೆಡ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೀತ್ ಜೈನ್ ಹಣಕಾಸು ವರ್ಷ 2023-24ರಲ್ಲಿ 15.25 ಕೋಟಿ ರೂ., ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್​ನ (ಎಟಿಜಿಎಲ್) ಸಿಇಒ ಸುರೇಶ್ ಮಂಗಲಾನಿ 6.88 ಕೋಟಿ ರೂ. ಸಂಬಳ ರೂಪದಲ್ಲಿ ಪಡೆದುಕೊಂಡಿದ್ದಾರೆ.

ಅಮೆರಿಕಕ್ಕೂ ಅಮುಲ್

ಮುಂಬೈ: ಅಮೆರಿಕದಲ್ಲಿ ಅಮುಲ್ ಬ್ರಾ್ಯಂಡ್ ಅಡಿಯಲ್ಲಿ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟವು ಸಿದ್ಧತೆ ನಡೆಸಿದೆ. ಈಗಾಗಲೇ ಅಮೆರಿಕದಲ್ಲಿ ಅಲ್ಲಿನ ಮಿಚಿಗನ್ ಹಾಲು ಉತ್ಪಾದಕರ ಸಂಘದ ಸಹಭಾಗಿತ್ವದಡಿ ಅಮುಲ್ ತಾಜಾ ಹಾಲನ್ನು ಮಾರಾಟ ಮಾಡುತ್ತಿದೆ. ಶೀಘ್ರವೇ, ಹಾಲಿನ ಉತ್ಪನ್ನಗಳ ಮಾರಾಟ ಆರಂಭಿಸುವ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸಲು ಒಕ್ಕೂಟ ನಿರ್ಧರಿಸಿದೆ. ಶೀಘ್ರವೇ ಅಮುಲ್​ನ ಮೊಸರು, ಲಸ್ಸಿ, ಮಜ್ಜಿಗೆ, ಪನ್ನೀರ್ ಸೇರಿ ಇತರ ಉತ್ಪನ್ನಗಳ ಮಾರಾಟ ಆರಂಭಿಸಲಾಗುವುದು. ಕೆನೆಡಾದಲ್ಲಿಯೂ ಹಾಲು ಮಾರಾಟ ಮಾಡುವ ಯೋಜನೆ ಇದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಹೇಳಿದ್ದಾರೆ.

71 ಸಾವಿರ ಟನ್ ಈರುಳ್ಳಿ ದಾಸ್ತಾನು

ನವದೆಹಲಿ: ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಪ್ರಸಕ್ತ ವರ್ಷದಲ್ಲಿ 5 ಲಕ್ಷ ಟನ್ ಈರುಳ್ಳಿ ದಾಸ್ತಾನಿಗೆ ನಿರ್ಧರಿಸಲಾಗಿದ್ದು, ಈ ಪೈಕಿ 71 ಸಾವಿರ ಟನ್ ಸಂಗ್ರಹಣೆ ಮಾಡಲಾಗಿದೆ ಎಂದು ಕೇಂದ್ರ ಗ್ರಾಹಕರ ವ್ಯವಹಾರ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಪ್ರಸ್ತುತ ಈರುಳ್ಳಿಯ ದರ ಸರಾಸರಿ 38.67 ರೂ. ಇದೆ. ಮಾರುಕಟ್ಟೆಯಲ್ಲಿ ಸಾಮಾನ್ಯ ದರ 40 ರೂ. ಇದೆ. ದೇಶದ ಬಹುತೇಕ ರಾಜ್ಯಗಳಿಗೆ ಮುಂಗಾರು ಆವರಿಸಿಕೊಳ್ಳುತ್ತಿದ್ದು, ಮಳೆ ಸುರಿಯುತ್ತಿದೆ. ಹಾಗಾಗಿ, ಚಿಲ್ಲರೆ ಧಾರಣೆಯಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ. ಕಳೆದ ವರ್ಷಕ್ಕಿಂತ ಈ ವರ್ಷ ಈರುಳ್ಳಿ ಉತ್ಪಾದನೆಯಲ್ಲಿ ಶೇಕಡ 20ರಷ್ಟು ಕುಸಿತ ಉಂಟಾಗಿದ್ದು, ಮುಂಬರುವ ದಿನಗಳಲ್ಲಿ ಸಂಭಾವ್ಯ ಬೆಲೆಯೇರಿಕೆಯನ್ನು ತಡೆಯಲು ಸಂಗ್ರಹ, ದಾಸ್ತಾನು ಪ್ರಮಾಣವನ್ನು ಹಂತ-ಹಂತವಾಗಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಚಿನ್ನ, ಬೆಳ್ಳಿ ಧಾರಣೆ ಕುಸಿತ

ಮುಂಬೈ: ಇತ್ತೀಚಿಗಷ್ಟೇ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿಯ ದರಗಳು ಭಾನುವಾರ ಮತ್ತೆ ಕುಸಿತ ಕಂಡಿವೆ. ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ ಪ್ರತಿ 10 ಗ್ರಾಂಗೆ 870 ರೂ. ಇಳಿಕೆಯಾಗಿದ್ದು, 72,380 ರೂ.ಗೆ ಕುಸಿದಿದೆ. 22 ಕ್ಯಾರೆಟ್​ನ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲೂ 800 ರೂ. ಇಳಿಕೆಯಾಗಿದ್ದು, 66,350 ರೂ. ತಲುಪಿದೆ. ಬೆಳ್ಳೆಯೂ ಕೆಜಿಗೆ 1,500 ರೂ.ಗಳಷ್ಟು ಕಡಿಮೆಯಾಗಿದ್ದು, 92 ಸಾವಿರ ರೂ.ಗಳ ಆಸುಪಾಸಿನಲ್ಲಿದೆ.

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (ಪ್ರತಿ 10 ಗ್ರಾಂಗೆ)

  • ಬೆಂಗಳೂರು: 66,400 ರೂ.
  • ಅಹಮದಾಬಾದ್: 66,450 ರೂ. ್ಝ ಚೆನ್ನೈ: 67,000 ರೂ.
  • ಮುಂಬೈ: 66,400 ರೂ.
  • ದೆಹಲಿ: 66,550 ರೂ.
  • ಕೋಲ್ಕತಾ: 66,400 ರೂ.
  • ಭುವನೇಶ್ವರ: 66,400 ರೂ.

ಎಸಿಗಳಿಗೆ ಅಭೂತಪೂರ್ವ ಬೇಡಿಕೆ

ದೇಶದ ಬಹುತೇಕ ಭಾಗಗಳಲ್ಲಿ ಹೆಚ್ಚುತ್ತಿರುವ ನಿರಂತರ ಶಾಖದ ಅಲೆಯ ಪರಿಣಾಮವಾಗಿ ಏರ್ ಕಂಡೀಷನರ್​ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ದಾಖಲೆ ಪ್ರಮಾಣದ ಬೇಡಿಕೆಯನ್ನು ಪೂರೈಸಲು ತಯಾರಕರು ಏರ್ ಕಂಡೀಷನರ್​ಗಳ ಬಿಡಿಭಾಗಗಳಾದ ಕಂಪ್ರೆಸರ್​ಗಳು, ಕ್ರಾಸ್ ಫೋ› ಫ್ಯಾನ್/ ಮೋಟಾರ್ ಮತ್ತು ಪಿಸಿಬಿ ಸರ್ಕ್ಯೂಟ್​ಗಳನ್ನು ಏರ್​ಲಿಫ್ಟಿಂಗ್ ಮೂಲಕ ತರಿಸಿಕೊಳ್ಳುತ್ತಿದ್ದಾರೆ.

ಭಾರತದ ಏರ್ ಕಂಡೀಷನರ್ ತಯಾರಕ ಕಂಪನಿಗಳು ಚೀನಾ, ತೈವಾನ್, ಥೈಲ್ಯಾಂಡ್, ಮಲೇಷ್ಯಾ ಮತ್ತು ಜಪಾನ್​ನಂತಹ ಅನೇಕ ದೇಶಗಳ ಜಾಗತಿಕ ಪೂರೈಕೆದಾರರಿಂದ ಬಿಡಿಭಾಗಗಳನ್ನು ತುರ್ತಾಗಿ ವಾಯುಮಾರ್ಗದ ಮೂಲಕ ತರಿಸಿಕೊಳ್ಳುತ್ತಿವೆ.

ಈ ಬಿಡಿಭಾಗಗಳ ಪೂರೈಕೆಯು ಸಾಂಪ್ರದಾಯಿಕವಾಗಿ ಸಾಗರ ಸರಕು ಸಾಗಣೆಯ ಮೂಲಕ ಸಾಗುತ್ತದೆ. ಆದರೆ, ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ಬೇಡಿಕೆಗೆ ಅನುಗುಣವಾಗಿ ತ್ವರಿತ ಉತ್ಪಾದನೆ ಕೈಗೊಳ್ಳಲು ಬಿಡಿಭಾಗಗಳ ಏರ್​ಲಿಫ್ಟಿಂಗ್ ಮಾಡಲಾಗುತ್ತಿದೆ. ತಾಮ್ರ ಮತ್ತು ಅಲ್ಯೂಮಿನಿಯಂನಂತಹ ಲೋಹಗಳ ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಮೂಲಕ ಏರ್ ಕಂಡೀಷನರ್ ತಯಾರಕರು ಬೆಲೆಗಳನ್ನು ಶೇಕಡ 4-5ರಷ್ಟು ಹೆಚ್ಚಿಸಿದ್ದಾರೆ. ಇದಲ್ಲದೆ, ಏರ್ ಕಂಡೀಷನರ್​ಗಳನ್ನು ಅಳವಡಿಸಲು ಒಂದು ವಾರ ಅಥವಾ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಾಗುತ್ತಿದೆ. ರೂಮ್ ಹವಾನಿಯಂತ್ರಣ ಉದ್ಯಮವು ಕಳೆದ ಮೂರು ತಿಂಗಳಲ್ಲಿ ಅಂದಾಜು 50 ಪ್ರತಿಶತದಷ್ಟು ಬೆಳವಣಿಗೆ ಕಂಡಿದೆ, ಇದು ನಿರೀಕ್ಷೆಗಳನ್ನು ಮೀರಿದೆ ಎಂದು ಡೈಕಿನ್ ಏರ್ ಕಂಡೀಷನಿಂಗ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕನ್ವಾಲ್ಜೀತ್ ಜಾವಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net