

ನವದೆಹಲಿ: ಹಿಂಡನ್ಬರ್ಗ್ ರೀಸರ್ಚ್ ವರದಿಯ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಅದಾನಿ ಸಮೂಹ ಗುಜರಾತ್ನ ಮುಂದ್ರಾದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ 34,900 ಕೋಟಿ ರೂಪಾಯಿ ಮೊತ್ತದ ಕಲ್ಲಿದ್ದಲಿನಿಂದ ಪೊಲಿವಿನಿಲ್ ಕ್ಲೋರೈಡ್ (ಪಿವಿಸಿ) ಯೋಜನೆಯನ್ನು ಕೈಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಗಾಗಿ ಹಣ ಸಂಗ್ರಹಿಸುವ ಯೋಜನೆಗೂ ಅದು ತಿಲಾಂಜಲಿ ನೀಡಿದೆ. ಈ ಯೋಜನೆಗಾಗಿ ಎಸ್ಬಿಐ ನೇತೃತ್ವದ ಏಳರಿಂದ ಎಂಟು ಬ್ಯಾಂಕ್ಗಳ ಸಮೂಹದಿಂದ 14,000 ಕೋಟಿ ರೂಪಾಯಿ ಸಂಗ್ರಹಿಸಲು ಮಾತುಕತೆ ನಡೆಸಲಾಗುತ್ತಿತ್ತು. ಅದಾನಿ ಸಮೂಹದಿಂದ ನಡೆದಿದೆ ಎನ್ನಲಾದ ವಂಚನೆಗಳ ಬಗ್ಗೆ ಹಿಂಡನ್ಬರ್ಗ್ ಪ್ರಕಟಿಸಿದ ವರದಿಯಿಂದ ಆದ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಕಂಪನಿ ಪ್ರಯತ್ನಿಸುತ್ತಿರುವುದರ ನಡುವೆಯೇ ವಾರ್ಷಿಕ ದಶಲಕ್ಷ ಟನ್ ಹಸಿರು ಪಿವಿಸಿ ಯೋಜನೆಯ ಎಲ್ಲ ಚಟುವಟಿಕೆಗಳನ್ನು ತಕ್ಷಣ ದಿಂದಲೇ ನಿಲ್ಲಿಸುವಂತೆ ಸಂಬಂಧಪಟ್ಟ ಎಲ್ಲ ವರ್ತಕರು ಮತ್ತು ಸರಬರಾಜು ದಾರರಿಗೆ ಅದಾನಿ ಗ್ರೂಪ್ ಇಮೇಲ್ ರವಾನಿಸಿದೆ.
ಭಾರತದಲ್ಲಿ ಪಿವಿಸಿ ವಾರ್ಷಿಕ ಬೇಡಿಕೆ 3.50 ದಶಲಕ್ಷ ಟನ್ ಆಗಿರುವ ಹಿನ್ನೆಲೆಯಲ್ಲಿ ಮುಂದ್ರಾ ಪೆಟ್ರೋಕೆಮಿಕಲ್ ಯೋಜನೆಯನ್ನು ಅದಾನಿ ಗ್ರೂಪ್ ರೂಪಿಸಿತ್ತು.