

Trisha Krishnan: ತಮಿಳು ಚಿತ್ರರಂಗದ ಸ್ಟಾರ್ ಹೀರೋ ಕಮಲ್ ಹಾಸನ್ ಮತ್ತು ಖ್ಯಾತ ನಿರ್ದೇಶಕ ಮಣಿರತ್ನಂ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ 'ಥಗ್ ಲೈಫ್' ಚಿತ್ರ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಪ್ರಶಂಸೆಯ ಜೊತೆಗೆ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.
ಚಿತ್ರದ ಟ್ರೇಲರ್ನಲ್ಲಿ ನಟಿ ಅಭಿರಾಮಿ ಜೊತೆಗೆ ಕಿಸ್ಸಿಂಗ್ ಸೀನ್ ಮಾಡಿರುವ ಕಮಲ್ ಹಾಸನ್, ತ್ರಿಶಾ ಅವರೊಂದಿಗೆ ಹೇಳುವ ಡೈಲಾಗ್ ನೋಡುಗರನ್ನು ಕೆರಳಿಸಿದೆ. ಅಭಿರಾಮಿ ಮತ್ತು ತ್ರಿಶಾ ಇಬ್ಬರೂ ನಟಿಯರೊಂದಿಗೆ ಕಮಲ್ಗೆ ಭಾರೀ ವಯಸ್ಸಿನ ಅಂತರವಿದೆ. ಹೀಗಿರುವಾಗ ಇಂಥಾ ಸೀನ್ಗಳ ಅಗತ್ಯವಿತ್ತೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕಮಲ್ ಹಾಸನ್ ಅವರು ದೃಶ್ಯವೊಂದರಲ್ಲಿ ತ್ರಿಷಾಗೆ ಹೇಳುವ ಸಂಭಾಷಣೆ ತುಂಬಾ ಬೋಲ್ಡ್ ಆಗಿದೆ. ಇದು ತೀವ್ರ ಟೀಕೆಗಳಿಗೆ ಕಾರಣವಾಗಿದೆ.
ಕಮಲ್ ಹಾಸನ್ಗೂ ನಟಿಯರ ನಡುವೆ ಭಾರೀ ವಯಸ್ಸಿನ ಅಂತರವಿದ್ದು, ಪ್ರಣಯ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಹೀಗಾಗಿಯೇ ಟ್ರೇಲರ್ಗೆ ಮಿಶ್ರ ವಿಮರ್ಶೆಗಳು ವ್ಯಕ್ತವಾಗಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಸಖತ್ ಬಿಜಿಯಾಗಿರುವ ತ್ರಿಶಾ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಲಾಯಿತು. ವಯಸ್ಸಿನ ಅಂತರ ಟೀಕೆಗಳಿಗೆ ಸಂಬಂಧಿಸಿದಂತೆ ಕಡೆಗೂ ನಟಿ ಮೌನ ಮುರಿದಿದ್ದಾರೆ.
"ಸಿನಿಮಾ ಘೋಷಣೆಯಾದ ಮೊದಲ ದಿನದಿಂದಲೂ, ನಾನು ಒಪ್ಪಿಗೆ ಸೂಚಿಸುವ ಮೊದಲೇ ತಾರಾಗಣ ಹಾಗೂ ಕಥೆಯ ಬಗ್ಗೆ ಚೆನ್ನಾಗಿ ತಿಳಿದಿತ್ತು. ಆಗಿನಿಂದಲೂ ನನ್ನ ಪ್ರತಿಕ್ರಿಯೆ, 'ವಾವ್, ಇದು ಮ್ಯಾಜಿಕ್' ಎಂದೇ ಇದೆ. ಟೀಕೆಗಳಿಗೆ ನಾನು ತಲೆಕಡಿಸಿಕೊಳ್ಳುವುದಿಲ್ಲ. ನನಗೆ ಸಿಂಬು ಮತ್ತು ಕಮಲ್ ಸರ್ ತುಂಬಾ ವರ್ಷಗಳ ಪರಿಚಯ. ಹೀಗಾಗಿ ಚಿತ್ರೀಕರಣದ ಸಮಯದಲ್ಲಿ ನನಗೆ ತುಂಬಾ ಸುಲಭ ಅನಿಸಿತು. ನನ್ನ ಸಿನಿಮಾ ವೃತ್ತಿಜೀವನದಲ್ಲಿ, ಕಮಲ್ ಸರ್ ನನಗೆ ಮಾರ್ಗದರ್ಶಕರಾಗಿದ್ದಾರೆ" ಎಂದು ಹೇಳಿದರು.
ಗ್ಯಾಂಗ್ಸ್ಟರ್ ಡ್ರಾಮಾ ಚಿತ್ರದಲ್ಲಿ ಸಿಂಬು, ತ್ರಿಷಾ ಕೃಷ್ಣನ್, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಅಭಿರಾಮಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಈ ಸಿನಿಮಾವನ್ನು ಕಮಲ್ ಹಾಸನ್, ಆರ್. ಮಹೇಂದ್ರನ್, ಮಣಿರತ್ನಂ, ಶಿವ ಅಣ್ಣಾತಿ ಹಾಗೂ ಉದಯನಿಧಿ ಸ್ಟಾಲಿನ್ ನಿರ್ಮಿಸಿದ್ದಾರೆ. ಈ ಚಿತ್ರ ಜೂನ್ 5 ರಂದು ಬಿಡುಗಡೆಯಾಗಲಿದೆ,(ಏಜೆನ್ಸೀಸ್).