ಅಲ್ಲಿಯವರೆಗೂ ನನ್ನನ್ನು ನೆಮ್ಮದಿಯಿಂದ ಬದುಕಲು ಬಿಡಿ; ನಟ ಜಯಂ ರವಿ ಜೊತೆಗಿದ್ದ ಗಾಯಕಿ ಕೆನಿಶಾಗೆ ಕೊಲೆ ಬೆದರಿಕೆ! Jayam Ravi

ವಿಜಯವಾಣಿ - 2025-05-24T081143.058
Published on

Jayam Ravi: ಕಾಲಿವುಡ್ ಸ್ಟಾರ್ ಹೀರೋ, ನಟ ಜಯಂ ರವಿ (ರವಿ ಮೋಹನ್) ಮತ್ತು ಅವರ ಪತ್ನಿ ಆರತಿ ರವಿ ನಡುವಿನ ವಿಚ್ಛೇದನ ಪ್ರಕರಣ ಇದೀಗ ತಮಿಳು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. 2009ರಲ್ಲಿ ವಿವಾಹವಾದ ಈ ದಂಪತಿ 18 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಲು ಕೋರ್ಟ್​ ಮೊರೆ ಹೋಗಿದ್ದಾರೆ. ಪ್ರಸ್ತುತ ಇಬ್ಬರ ನಡುವಿನ ವಿಚ್ಛೇದನ ಅರ್ಜಿ ಇನ್ನೂ ವಿಚಾರಣೆಯಲ್ಲಿದೆ. ಈ ಮಧ್ಯೆ ದೊಡ್ಡ ವಿವಾದವೇ ಸೃಷ್ಟಿಯಾಗಿದ್ದು, ರವಿ ಪತ್ನಿ ಆರತಿ,  ಗಾಯಕಿ ಕೆನಿಶಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇನ್ನು ಇತ್ತೀಚೆಗೆ ಜಯಂ ರವಿ ಅವರು ಗಾಯಕಿ ಕೆನಿಶಾ ಜೊತೆ ಮದುವೆಯಲ್ಲಿ ಕಾಣಿಸಿಕೊಂಡಿದ್ದೇ ಸದ್ಯ ಆರತಿ ಮತ್ತು ರವಿ ನಡುವಿನ ಜಾಲತಾಣ ಜಟಾಪಟಿಗೆ ಕಾರಣವಾಗಿದೆ. ಈ ವಿಚಾರ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಆರತಿ ತುಂಬಾ ಭಾವುಕರಾಗಿ ಸುದೀರ್ಘ ಪೋಸ್ಟ್​ ಮೂಲಕ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದರು. ಅವರ ಬೆನ್ನಲ್ಲೇ ರವಿ ಕೂಡ ಪೋಸ್ಟ್ ಮಾಡಿದ್ದರು. ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಜಾಲತಾಣದ ಖಾತೆಗಳಲ್ಲಿ ಸ್ಪಷ್ಟನೆ ನೀಡುವ ಮೂಲಕ ಈ ವಿಚಾರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.

ಇಬ್ಬರ ಜಗಳದಲ್ಲಿ ಕೆನಿಶಾ ಅಳಲು

ಆರತಿ ಮತ್ತು ಜಯಂ ರವಿ ಮಧ್ಯೆ ಇನ್ನೂ ಡಿವೋರ್ಸ್​ ಆಗಿಲ್ಲ. ಈ ವಿಚಾರ ಗೊತ್ತಿದ್ದರೂ ಕೆನಿಶಾ ಏಕೆ ಅವರೊಂದಿಗೆ ಓಡಾಡುತ್ತಿದ್ದಾರೆ? ರವಿ ಅವರ ಪ್ರೇಯಸಿ ಆಗಿರುವುದೇಕೆ? ಎಂಬ ಪ್ರಶ್ನೆಗಳು ಕೆನಿಶಾ ವಿರುದ್ಧ ಕೇಳಿಬಂದಿವೆ. ಗಾಯಕಿ ಮತ್ತು ರವಿ ಮಧ್ಯೆ ಪ್ರೇಮಾಂಕುರವಿದೆ. ಆದರೆ, ಇವರಿಬ್ಬರು ಯಾರ ಮುಂದೆಯೂ ಈ ವಿಚಾರವನ್ನು ಇನ್ನೂ ಸ್ಪಷ್ಟಪಡಿಸಿಲ್ಲ ಎಂಬ ಮಾತುಗಳು ಕಾಲಿವುಡ್​ ವಲಯದಲ್ಲಿ ಕೇಳಿಬಂದಿವೆ. ಆರತಿ ಮತ್ತು ರವಿ ದಾಂಪತ್ಯ ಮುರಿದುಬೀಳಲು ತಾನೇ ಕಾರಣ ಎಂಬ ಹಲವರ ಟೀಕೆ, ಆರೋಪಗಳಿಗೆ ಇದೀಗ ಸ್ವತಃ ಕೆನಿಶಾ ಅವರೇ ಪ್ರತಿಕ್ರಿಯಿಸಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದಷ್ಟು ಬೆದರಿಕೆ, ಆರೋಪಗಳ ಸ್ಕ್ರೀನ್​ಶಾಟ್​ಗಳನ್ನು ಹಂಚಿಕೊಂಡಿರುವ ಕೆನಿಶಾ, "ಸದ್ಯಕ್ಕೆ ನಾನು ನನ್ನೆಲ್ಲ ಸಾಮಾಜಿಕ ಜಾಲತಾಣ ಖಾತೆಗಳ ಕಮೆಂಟ್​ ಬಾಕ್ಸ್​ ಆಫ್ ಮಾಡಿದ್ದೀನಿ. ಇಲ್ಲಿ ನಾನು ಯಾರಿಂದಲೋ ತಪ್ಪಿಸಿಕೊಳ್ಳಲು ಅಥವಾ ಓಡಿ ಹೋಗುವ ಪ್ರಯತ್ನದಲ್ಲಿಲ್ಲ. ನಿಮಗೆ ನನ್ನನ್ನು ಪ್ರಶ್ನಿಸುವ ಹಕ್ಕಿದೆ. ನನ್ನನ್ನೇ ನೇರವಾಗಿ ಕೇಳಿ, ಖಂಡಿತ ನಾನು ಉತ್ತರಿಸುವೆ. ಸತ್ಯವನ್ನು ಹೇಳಲು ನನಗೂ ಮನಸ್ಸಿದೆ" ಎಂದಿದ್ದಾರೆ.

"ನನ್ನ ಸುತ್ತಮುತ್ತ ನಡೆಯುತ್ತಿರುವ ಕೆಲವು ವಿಚಾರಗಳಿಗೆ ನಾನೂ ಕೂಡ ಕಾರಣ ಎಂಬ ಅರಿವು ನನಗಿದೆ. ನನ್ನನ್ನು ಕೋರ್ಟ್​ ಮುಂದೆ ನಿಲ್ಲಿಸಿ. ನಿಮಗೆ ಗೊತ್ತಿದ್ಯಾ ಇದೆಲ್ಲದರಿಂದ ನಾನೆಷ್ಟು ಅನುಭವಿಸುತ್ತಿದ್ದೀನಿ ಅಂತ? ಹಿಡಿಶಾಪಗಳನ್ನು ಹಾಕುತ್ತಿದ್ದೀರಾ. ಇದು ವಿಪರೀತ ನೋವು ಕೊಡುತ್ತಿದೆ. ಕರ್ಮ ಯಾರನ್ನೂ ಸುಮ್ಮನೆ ಬಿಡೋದಿಲ್ಲ. ನೀವೆಲ್ಲ ನನ್ನನ್ನು ದೂರುತ್ತಿದ್ದೀರಿ. ನಿಮ್ಮ ಭಾವನೆಗಳು ನನಗೆ ಅರ್ಥ ಆಗುತ್ತೆ. ಆದ್ರೆ, ಸತ್ಯ ಹೊರಬರುವವರೆಗೂ ಕಾಯುವುದು ಒಳಿತು. ಸತ್ಯ ಗೊತ್ತಿಲ್ಲದೇ ಹಲವರು ಇಂಥಾ ಟೀಕೆಗಳನ್ನು ಮಾಡುತ್ತಿದ್ದೀರಾ. ಶೀಘ್ರವೇ ಎಲ್ಲವೂ ಹೊರಬರಲಿ. ಅಲ್ಲಿಯವರೆಗೂ ನನ್ನನ್ನು ದ್ವೇಷಿಸಬೇಡಿ. ತಪ್ಪಿದ್ದರೆ ಖಂಡಿತ ನಾನು ಶಿಕ್ಷೆಗೆ ಗುರಿಯಾಗುತ್ತೇನೆ. ಅಲ್ಲಿಯವರೆಗಾದರೂ ನಾನು ನೆಮ್ಮದಿಯಿಂದ ಬದುಕಲು ಬಿಡಿ" ಎಂದು ಕೆನಿಸಾ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net