

ಮುಂಬೈ: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹಾಗೂ ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಇತ್ತೀಚೆಗೆಷ್ಟೇ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಬಾಕ್ಸ್ ಆಫೀಸ್ನಲ್ಲಿ ಚಿತ್ರತಂಡ ನಿರೀಕ್ಷಿಸಿದಂತೆ ಉತ್ತಮ ಗಳಿಕೆ ಕಂಡಿತು. ಕಲೆಕ್ಷನ್ ಕಂಡರೂ ಸಿನಿಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆಯುವಲ್ಲಿ ಚಿತ್ರತಂಡ ಭಾರೀ ಹಿನ್ನಡೆಯನ್ನು ಅನುಭವಿಸಿತು. ಅದಕ್ಕೆ ಕಾರಣ ಚಿತ್ರದಲ್ಲಿ ಬಳಸಿದ ದೃಶ್ಯಗಳು!
ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ 'ಅನಿಮಲ್' ಕೂಡ ಒಂದಾಗಿದ್ದು, ಕೇವಲ ಭಾರತದಲ್ಲಿ 640 ಕೋಟಿ ರೂ. ಗಳಿಸಿತು ಮತ್ತು ವಿಶ್ವಾದ್ಯಂತ 875 ಕೋಟಿ ರೂ. ಕಲೆಕ್ಷನ್ ಮಾಡಿತು. ಸಿನಿಮಾದಲ್ಲಿನ ಹಸಿಬಿಸಿ ದೃಶ್ಯಗಳು ವ್ಯಾಪಕ ಟೀಕೆ ಮತ್ತು ಟ್ರೋಲ್ಗಳಿಗೆ ಗುರಿಯಾದ ಚಿತ್ರವನ್ನು ಅನೇಕರು ತೀವ್ರವಾಗಿ ಖಂಡಿಸಿದರು. ಚಿತ್ರದಲ್ಲಿ ಜೋಯಾ ಎಂಬ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ತೃಪ್ತಿ ದಿಮ್ರಿ ಸಿನಿಮಾದ ಸಂಪೂರ್ಣ ಆಕರ್ಷಣೆಯಾಗಿದ್ದರು ಹಾಗೂ ಚಿತ್ರರಸಿಕರ ಗಮನ ಸೆಳೆಯುವಲ್ಲಿ ಪ್ರಮುಖರಾದರು.
ಈ ಚಿತ್ರದ ಬಳಿಕ ತೃಪ್ತಿ ದಿಮ್ರಿಗೆ ಸಾಕಷ್ಟು ಹೊಸ ಹೊಸ ಆಫರ್ಗಳು ಒದಗಿ ಬರುತ್ತಿದ್ದು, ಹೆಚ್ಚು ನಿರೀಕ್ಷಿತ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ನಟಿಗೆ ಲಭಿಸುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ತೃಪ್ತಿ ಮ್ಯೂಸಿಕಲ್ ರೊಮ್ಯಾಂಟಿಕ್ ಜಾನರ್ನ ಮುಂದಿನ 'ಆಶಿಕಿ 3' ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜತೆಗೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸದ್ಯ ಈ ಕುರಿತಂತೆ ನಟಿಯ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದು, ಮುಂಬರುವ ಹೊಸ ಹೊಸ ಯೋಜನೆಗಳ ಬಗ್ಗೆ ಹೆಚ್ಚು ಮಾಹಿತಿ ತಿಳಿಯಲು ನಿರೀಕ್ಷಿಸುತ್ತಿದ್ದಾರೆ,(ಏಜೆನ್ಸೀಸ್).