

ಮುಂಬೈ: ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಹಾಗೂ 'ಕೆಜಿಎಫ್' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ 'ಸಲಾರ್: ಭಾಗ 1' ಚಿತ್ರ ಇದೇ ಡಿಸೆಂಬರ್ 22 ರಂದು ಜಾಗತಿಕವಾಗಿ ಬಿಡುಗಡೆಗೊಂಡು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದೆ. ರಿಲೀಸ್ ಆಗಿ 5 ದಿನಕ್ಕೆ ಹೆಜ್ಜೆಯಿಟ್ಟಿರುವ ಸಲಾರ್, ಇಂಡಿಯನ್ ಬಾಕ್ಸ್ ಆಫೀಸ್ ಹಾಗೂ ಅಮೆರಿಕಾದಲ್ಲಿ ಒಟ್ಟು ಗಳಿಸಿದ್ದೆಷ್ಟು ಎಂಬುದರ ವಿವರ ಹೀಗಿದೆ ನೋಡಿ.
ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ನಲ್ಲಿ ಮೂಡಿಬಂದ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಸಿನಿಪ್ರೇಕ್ಷಕರು ದೊಡ್ಡ ಪರದೆಯ ಮೇಲೆ ಸಿನಿಮಾ ನೋಡಿ, ಇದೀಗ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ್ಯಕ್ಷನ್, ಮಾಸ್ ಜಾನರ್ ಹೊಂದಿರುವ 'ಸಲಾರ್' ಸದ್ಯ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಮಿಂಚಿನ ಓಟ ಆರಂಭಿಸಿದ್ದು, ಐದನೇ ದಿನಕ್ಕೆ 274 ಕೋಟಿ ರೂ. ಗಳಿಕೆ ಕಂಡಿದೆ.
ಈಗಾಗಲೇ ಅಮೆರಿಕಾ ಬಾಕ್ಸ್ ಆಫೀಸ್ನಲ್ಲಿಯೂ ಅಬ್ಬರಿಸಿರುವ 'ಸಲಾರ್' 6.8 ಮಿಲಿಯನ್ ಡಾಲರ್ ಗಳಿಕೆಯನ್ನು ಮೀರಿದ್ದು, ಕ್ರಿಸ್ಮಸ್ ಹಬ್ಬದ ರಜೆ ದಿನಗಳನ್ನು ಒಳಗೊಂಡಂತೆ ಶೀಘ್ರವೇ 10 ಮಿಲಿಯನ್ ಡಾಲರ್ ಅನ್ನು ದಾಟಲಿದೆ ಎಂದು ನಿರೀಕ್ಷಿಸಲಾಗಿದೆ.
ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಜಗಪತಿ ಬಾಬು, ಬಾಬಿ ಸಿಂಹ, ತಿನ್ನು ಆನಂದ್, ಈಶ್ವರಿ ರಾವ್ ಶ್ರೀಯಾ ರೆಡ್ಡಿ ಮುಂತಾದವರ ತಾರಾಗಣವಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತವಿದೆ,(ಏಜೆನ್ಸೀಸ್).