

ಆಂಧ್ರಪ್ರದೇಶ: ಟಾಲಿವುಡ್ ನಟಿ ಸಮಂತಾ ರುತು ಪ್ರಭು ಅವರು ಮೈಯೋಸೈಟಿಸ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದು ಕಳೆದ ವರ್ಷ ಬಹಿರಂಗವಾಯಿತು. ನಟಿ ಈ ಅಪರೂಪದ ರೋಗಕ್ಕೆ ತುತ್ತಾಗಿದ್ದು, ಇದೀಗ ಚಿಕಿತ್ಸೆಗೆಂದು ಎರಡು ತಿಂಗಳ ಕಾಲ ಅಮೆರಿಕಾಗೆ ತೆರಳಲಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹರಿದಾಡಿದೆ.
ಸದ್ಯ ಟಾಲಿವುಡ್ ಅಂಗಳದಲ್ಲಿ ವಿಜಯ್ ದೇವರಕೊಂಡ ನಟನೆಯ 'ಖುಷಿ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸಮಂತಾ, ಆರು ತಿಂಗಳ ಕಾಲ ನಟನೆಯಿಂದ ವಿರಾಮ ಪಡೆದು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಕೆಲವು ದಿನಗಳ ರಜೆ ಮತ್ತು ವಿಶ್ರಾಂತಿಯ ನಂತರ, ನಟಿ ಈಗ ತಮ್ಮ ಖಾಯಿಲೆಗೆ ಚಿಕಿತ್ಸೆ ಪಡೆಯಲು ಮುಂದಾಗಿದ್ದು, ಎರಡು ತಿಂಗಳ ಕಾಲ ಅಮೆರಿಕಾಗೆ ಹೋಗಲಿದ್ದಾರೆ ಎಂದು ಇತ್ತೀಚಿನ ವರದಿ ತಿಳಿಸಿದೆ.
ಮಯೋಸೈಟಿಸ್ ಚಿಕಿತ್ಸೆಗೆ ನಟಿ ಸಮಂತಾ ತಮ್ಮ ತಾಯಿಯೊಂದಿಗೆ ಅಮೆರಿಕಾಗೆ ಭೇಟಿ ನೀಡಿ, ಎರಡು ತಿಂಗಳ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಸುದ್ದಿ ಬಗ್ಗೆ ಸಮಂತಾ ಅಥವಾ ಅವರ ತಂಡ ಯಾವುದೇ ಅಧಿಕೃತ ಮಾಹಿತಿಯನ್ನು ತಿಳಿಸಿಲ್ಲ. ಸದ್ಯ ನಟಿಯ ಬಹುನಿರೀಕ್ಷಿತ ಚಿತ್ರ 'ಖುಷಿ' ಇದೇ ಸೆಪ್ಟಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತಮ್ಮ ನೆಚ್ಚಿನ ಹೀರೋಯಿನ್ ಅನ್ನು ಪರದೆಯ ಮೇಲೆ ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).