

Actress Rambha: 90ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಸಿಕರ ಅಚ್ಚುಮೆಚ್ಚಿನ ನಟಿಯಾಗಿ ಮಿಂಚಿದ ರಂಭಾ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ಏಕಾಏಕಿ ದೂರ ಸರಿದರು. ಇದು ಅವರ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿತು. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ, ಸಿನಿಪ್ರಿಯರಿಂದ ಸೈಎನಿಸಿಕೊಂಡ ರಂಭಾ, ತದನಂತರ ಯಾವುದೇ ವೇದಿಕೆ ಅಥವಾ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ, ಇದೀಗ ದಿಢೀರ್ ಎಂಬಂತೆ ಒಂದು ಹೊಸ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮುಖೇನ ಸಿಹಿ ಸುದ್ದಿ ನೀಡಿದ್ದಾರೆ.
ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ಸ್ಟಾರ್ ನಟರೊಂದಿಗೆ ಅಭಿನಯಿಸಿದ್ದ ರಂಭಾ, ಸೂಪರ್ಹಿಟ್ ಸಕ್ಸಸ್ ಜತೆಗೆ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದರು. ಅಂದು ತಮ್ಮ ಕೋಲ್ಮಿಂಚಿನ ನೋಟದಿಂದಲೇ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ನಟಿ, ಈಗ ಮತ್ತೊಮ್ಮೆ ಸಿನಿಪ್ರೇಕ್ಷಕರನ್ನು ತೆರೆ ಮೇಲೆ ಮನರಂಜಿಸಲು ಸಿದ್ಧರಾಗಿದ್ದಾರೆ. ಹಲವು ವರ್ಷಗಳ ನಂತರ ಇದೀಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ರಂಭಾ ಒಲವು ತೋರಿದ್ದಾರೆ. ಈ ಕುರಿತು ಸ್ವತಃ ರಂಭಾ ಅವರೇ ಪ್ರತಿಕ್ರಿಯಿಸಿ, ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
"ನನ್ನ ಮೊದಲ ಆಯ್ಕೆಯೇ ಸಿನಿಮಾ. ಈವರೆಗೂ ಅದೇ ಆಗಿದೆ. ಈಗ ನಾನು ಎಂತಹದ್ದೇ ಚಾಲೆಂಜಿಂಗ್ ಪಾತ್ರ ಮಾಡಲು ಸಿದ್ಧವಿದ್ದೇನೆ. ಈ ಸಮಯ ಅದಕ್ಕೆ ಸೂಕ್ತವಾಗಿದೆ. ಒಳ್ಳೊಳ್ಳೆ ಪಾತ್ರಗಳ ಮೂಲಕ ಮತ್ತೆ ಚಿತ್ರಪ್ರೇಮಿಗಳ ಹೃದಯವನ್ನು ಗೆಲ್ಲುವುದೇ ನನ್ನ ಉದ್ದೇಶ" ಎಂದು ಹೇಳಿದ್ದಾರೆ. ಈ ವಿಷಯ ಅಧಿಕೃತವಾಗಿ ಹೊರಬೀಳುತ್ತಿದ್ದಂತೆ ಜಾಲತಾಣಗಳಲ್ಲಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಯಾವ ಚಿತ್ರರಂಗ ರಂಭಾ ಅವರಿಗೆ ಮೊದಲ ಅವಕಾಶ ನೀಡಲಿದೆ? ಯಾರ ಚಿತ್ರದಲ್ಲಿ ಅವರು ನಟಿಸಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).