ಸಿನಿಮಾಗೆ ಗುಡ್​ಬೈ ಹೇಳಬೇಕಿದ್ದ ನನ್ನ ನಿರ್ಧಾರ ಬದಲಿಸಿದ್ದೇ ಈ ಸ್ಟಾರ್ ಹೀರೋ​: ನಟಿ ಕಾಜೋಲ್​ | Kajol

kajol
Published on

ಮುಂಬೈ: 90ರ ದಶಕದಲ್ಲಿ ಹಿಂದಿ ಚಿತ್ರರಂಗವನ್ನು ಆಳಿದ ಸ್ಟಾರ್​ ನಟಿ ಎಂದರೆ ಅದು ಕಾಜೋಲ್ (Kajol)​. ಬಾಲಿವುಡ್​ನಲ್ಲಿ ಸುದೀರ್ಘ ಪಯಣ ಹೊಂದಿರುವ ಕಲಾವಿದರ ಪೈಕಿ ಕಾಜೋಲ್​ ಕೂಡ ಒಬ್ಬರು. ಅಂದಿನ ಕಾಲಘಟ್ಟದಲ್ಲಿ ತಮ್ಮ ಪಾತ್ರಗಳಿಂದಲೇ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ ಈ ನಟಿ, ಬಿಟೌನ್​ನ 'ಕಿಂಗ್ ಖಾನ್', ನಟ ಶಾರೂಖ್ ಖಾನ್​ ಅವರೊಂದಿಗೆ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಕೇವಲ ಚಿತ್ರಗಳು ಮಾತ್ರ ಸೂಪರ್​ಹಿಟ್​ ಆಗುವುದಲ್ಲದೇ, ಇವರಿಬ್ಬರ ಜೋಡಿ ಕೂಡ ಸೂಪರ್​ ಡೂಪರ್​ ಹಿಟ್ ಆಗಿತ್ತು. ಪ್ರೇಕ್ಷಕರನ್ನು ದಶಕಗಳ ಕಾಲ ಮನರಂಜಿಸಿದ ಇವರಿಬ್ಬರು, ಇಂದಿಗೂ ನೆಚ್ಚಿನ ಜೋಡಿ ಎಂಬ ಪಟ್ಟವನ್ನು ಪಡೆದಿದ್ದಾರೆ. ಈಗಲೂ ಸಹ ಶಾರೂಖ್​-ಕಾಜೋಲ್ ಯಾವುದಾದರೂ ಖಾಸಗಿ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡರೆ ಸಿನಿಪ್ರಿಯರು ಅಷ್ಟೇ ಪ್ರೀತಿ, ಅಭಿಮಾನ ತೋರುವುದು ವಿಶೇಷ.

ಪ್ರಸ್ತುತ 'ಡು ಪಟ್ಟಿ' ಎಂಬ ಹೊಸ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಕಾಜೋಲ್​, ಪ್ರಪ್ರಥಮ ಬಾರಿಗೆ ತಮ್ಮ ಸಿನಿ ಕರಿಯರ್​ನಲ್ಲಿ ಖಾಕಿ ಬಟ್ಟೆ ಧರಿಸಿ, ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಸಖತ್ ಬಿಸಿಯಾಗಿರುವ ನಟಿ, ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ತಾವು ಏಕೆ ಸಿನಿಮಾ ವೃತ್ತಿಯನ್ನು ತ್ಯಜಿಸಬೇಕೆಂದು ನಿರ್ಧರಿಸಿದ್ದರು ಎಂಬುದರ ಹಿಂದಿರುವ ಕಾರಣವನ್ನು ಇದೀಗ ಮುಕ್ತವಾಗಿ, ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

kajol

ಮೂರನೇ ಸಿನಿಮಾಗೆ ಗುಡ್​ಬೈ

ಸಾಮಾನ್ಯವಾಗಿ ತಮ್ಮ ಖಾಸಗಿ ಜೀವನ, ಸಿನಿವೃತ್ತಿಯ ಬಗ್ಗೆ ಅಷ್ಟಾಗಿ ಎಲ್ಲಿಯೂ ಮಾತನಾಡಲು ಬಯಸದ ಕಾಜೋಲ್​, ಆದಷ್ಟು ವಿವಾದಗಳಿಂದ ದೂರ ಉಳಿಯಲು ಇಚ್ಛಿಸುತ್ತಾರೆ. ಆದ್ರೆ, ಮೊದಲ ಬಾರಿಗೆ ಅವರು ತಮ್ಮ ಸಿನಿ ಪಯಣ ಬೇಡವೆಂದು ನಿರ್ಧರಿಸಿ, ಅದನ್ನು ಮತ್ತೆ ಮುಂದುವರಿಸಿದರ ಕುರಿತು ಇಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. "ನಟನಾ ಲೋಕಕ್ಕೆ ಎಂಟ್ರಿಕೊಟ್ಟ ನಂತರ ಅದು ನನ್ನ ಮೂರನೇ ಚಿತ್ರವಾಗಿತ್ತು. ಆಗ, ನಟಿಸುವುದು ಬೇಡ ಎಂದು ದೃಢವಾಗಿ ನಿರ್ಧರಿಸಿದೆ. ನನಗ್ಯಾಕೋ ಸಿನಿಮಾ ಹೊಂದಾಣಿಕೆ ಆಗ್ತಿಲ್ಲ ಎನಿಸಿತು. ಹೀಗಾಗಿ, ಮುಂಬರುವ ದಿನಗಳಲ್ಲಿ ನಟಿಸುವ ಕಾಯಕ ನನ್ನದಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ ಬಿಡೋಣ ಎಂದು ಮೂರಕ್ಕೆ ಮುಕ್ತಾಯ ಎನ್ನುವಂತೆ ಮೂರನೇ ಸಿನಿಮಾಗೆ ಗುಡ್​ಬೈ ಹೇಳಲು ಸಿದ್ಧವಾಗಿದ್ದೆ. ಆಗ, ನನ್ನ ನಿರ್ಧಾರ ಬದಲಾಯಿಸಿದ್ದೇ ಶಾರೂಖ್ ಖಾನ್"​ ಎಂದರು.

ಒಂದೊಳ್ಳೆ ಸಲಹೆ

“ಅಂದು ನಾನು ನಟಿಸಿದ 'ಉಧಾರ್ ಕಿ ಜಿಂದಗಿ' ನನ್ನ ಸಿನಿ ಕರಿಯರ್​ನ ಮೂರನೇ ಚಿತ್ರ. ಆಗ ತುಂಬಾ ಹೊಸಬಳು. 17- 18 ವರ್ಷ ವಯಸ್ಸಿನ ಆಸುಪಾಸಿನಲ್ಲಿದ್ದೆ. ನನಗೆ ನೆನಪಿದೆ, ನಾನು ಈ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿ, ಮುಂದೆ ನನ್ನಿಂದ ಇದನ್ನೆಲ್ಲ ಮಾಡಲು ಸಾಧ್ಯವಿಲ್ಲ ಎಂದಿದ್ದೆ. ಅಳುವ ಸೀನ್​ಗಳಲ್ಲಿ ಪ್ರತಿಬಾರಿ ಗ್ಲಿಸರಿನ್​ ಹಾಕಿಕೊಳ್ಳಲು ಆಗಲ್ಲ. ಇದರಿಂದ ನನ್ನ ಕಣ್ಣುಗಳು ತುಂಬ ಹಾನಿಯಾಗುತ್ತಿವೆ ಎಂದು ಅಮ್ಮನ ಬಳಿ ಭಾವುಕಳಾಗಿ ಮನದ ಭಾವನೆಯನ್ನು ಹಂಚಿಕೊಂಡಿದ್ದೆ. ಈ ವೇಳೆ ನನಗೆ ಒಂದೊಳ್ಳೆ ಸಲಹೆ ಕೊಟ್ಟ ಶಾರೂಖ್ ಖಾನ್​, 'ನಿಮಗೆ ಗೊತ್ತಿರಲಿ ನೀವು ಹೇಗೆ ನಟಿಸಬೇಕು ಎಂಬುದನ್ನು ಇಲ್ಲಿ ಕಲಿಯಬೇಕು' ಎಂದು ತಿಳಿ ಹೇಳಿದರು. ಆಗ ನನ್ನಲ್ಲಿ ಆದ ಬದಲಾವಣೆ ನಿಜಕ್ಕೂ ಮರೆಯಲಾಗದು. ಅದಾದ ಬಳಿಕ ಹಲವಾರು ಸಿನಿಮಾಗಳಿಗೆ ಬ್ಯಾಕ್ ಟು ಬ್ಯಾಕ್ ಸಹಿ ಹಾಕಿದೆ" ಎಂದು ಕಾಜೋಲ್​ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿ, ಮಾತನಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net