

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್(Bollywood Actor) ಸಲ್ಮಾನ್ ಖಾನ್‌ಗೆ ಮತ್ತೆ ಕೊಲೆ ಬೆದರಿಕೆ ಬಂದಿದೆ. 5 ಕೋಟಿ ರೂ. ನೀಡಬೇಕು, ಇಲ್ಲದಿದ್ದರೆ ನಿನ್ನ ಪರಿಸ್ಥಿತಿ ಬಾಬಾ ಸಿದ್ಧಿಕಿಗಿಂತ ಭೀಕರವಾಗಿರುತ್ತದೆ ಎಂದು ಎಚ್ಚರಿಸಲಾಗಿದೆ.
ಮುಂಬೈ ಟ್ರಾಫಿಕ್ ಪೊಲೀಸ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಖಾನ್ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದೀರ್ಘಕಾಲದ ದ್ವೇಷವನ್ನು ಪರಿಹರಿಸಲು ಬಯಸಿದರೆ, ಈ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ ಯಾರೋ ಸಂದೇಶ ಕಳೂಹಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಮ್ಮ ಎಚ್ಚರಿಕೆ ಪಾಲಿಸುವಲ್ಲಿ ವಿಫಲವಾದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ. ಅ.12 ರಂದು ಗುಂಡಿಕ್ಕಿ ಕೊಲ್ಲಲ್ಪಟ್ಟ ಬಾಬಾ ಸಿದ್ದಿಕಿಗಿಂತ ಸಲ್ಮಾನ್ ಸಾವು ಕೆಟ್ಟದಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಎಚ್ಚರಿಕೆ ಸಂದೇಶ ಕಳುಹಿಸುವವರ ಗುರುತು ಮತ್ತು ಉದ್ದೇಶಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಇನ್ನು ಬೆದರಿಕೆ ನಂತರ ಸಲ್ಮಾನ್ ಖಾನ್ ಅವರ ಬಾಂದ್ರಾ ಮನೆಯ ಹೊರಗೆ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಮನೆಯ ಹೊರಗೆ ಶಸ್ತ್ರಸಜ್ಜಿತ ಪೊಲೀಸರು, ಮತ್ತು ಮೀಸಲು ಪೊಲೀಸರನ್ನು ನಿಯೋಜಿಸಲಾಗಿದೆ.
2024ರ ಏಪ್ರಿಲ್‌ನಲ್ಲಿ ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡು ಹಾರಿಸಲಾಗಿತ್ತು. ಆಗ ಇದು ಅಂತಿಮ ಎಚ್ಚರಿಕೆ ಎಂದು ತಿಳಿಸಲಾಗಿತ್ತು.