

ಚೆನ್ನೈ: ತಮಿಳು ನಟಿ ಅನಿಕಾ ಸುರೇಂದ್ರನ್ ಮೃತಪಟ್ಟಿದ್ದಾರೆ ಎಂಬ ಪೋಸ್ಟರ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದಾಗಿ ಅವರ ಅಭಿಮಾನಿಗಳು ಶಾಕ್ ಆಗಿದ್ದು, ನಂತರ ಸತ್ಯ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.
ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಅನಿಕಾ ಸುರೇಂದ್ರನ್ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಗೌತಮ್ ಮೆನನ್ ಅವರ ಯೆನ್ನೈ ಅರಿಂದಾಲ್, ಆಕೆಯ ತಮಿಳು ಚೊಚ್ಚಲ ಚಿತ್ರವಾಗಿದ್ದು, ಇದು ಆಕೆಗೆ ಮಹತ್ವದ ತಿರುವನ್ನು ನೀಡಿದ ಚಿತ್ರವಾಗಿತ್ತು.
ನಂತರ, ವಿಶ್ವಾಸಂ ಚಿತ್ರದಲ್ಲಿ ನಟ ಅಜಿತ್ ಹಾಗೂ ನಟಿ ನಯನತಾರಾ ಮಗಳಾಗಿ ನಟಿಸಿದ ಅನಿಕಾ, ಸದ್ಯ ಪೂರ್ಣ ಪ್ರಮಾಣದ ನಾಯಕಿಯಾಗಿದ್ದು ಹಲವಾರು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ತನ್ನ ಚೊಚ್ಚಲ ಚಿತ್ರದಲ್ಲೇ ಲಿಪ್-ಲಾಕ್ ದೃಶ್ಯಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಗೆ ನಟಿ ಆಘಾತ ನೀಡಿದ್ದರು.
ಹೀಗಿರುವಾಗಲೇ ಆಕೆ ಮೃತಪಟ್ಟಿದ್ದಾಳೆ ಎನ್ನುವ ಪೊಸ್ಟರ್ ಎಲ್ಲೆಡೆ ಸದ್ದು ಮಾಡುತ್ತಿದೆ. ಜುಲೈ 2023ರಂದು ನಿಧನ ಎಂದು ಪೋಸ್ಟರ್ನಲ್ಲಿ ಉಲ್ಲೇಖಿಸಿರುವುದರಿಂದ, ಇದು ನಿಜವಾದ ಪೋಸ್ಟರ್ ಇರಬಹುದಾ? ಎಂಬ ಪ್ರಶ್ನೆ ಉದ್ಭವಿಸಿತ್ತು.
ಕೊನೆಗೆ, ಇದು ನಟಿ ಅನಿಕಾಳ ತಮಿಳು ಚಿತ್ರದ ಪೋಸ್ಟರ್ ಎಂದು ತಿಳಿದು ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಚಿತ್ರದ ಶೂಟಿಂಗ್ ಸ್ಪಾಟ್ನಲ್ಲಿ ಅಂಟಿಸಲಾಗಿದ್ದ ಪೋಸ್ಟರ್ನ ಫೋಟೋವನ್ನು ಯಾರೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಇದಕ್ಕೆ ಕಾರಣವಾಗಿದೆ.(ಏಜೆನ್ಸೀಸ್)