

ಬೆಂಗಳೂರು: ರಾಜ್ಯದೆಲ್ಲೆಡೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಪ್ರತಿಶತ 8%ರಷ್ಟು ಮತದಾನ ಆಗಿದೆ. ಬೆಳಿಗ್ಗೆಯಿಂದಲೇ ಮತಗಟ್ಟೆಯತ್ತ ತೆರಳಿದ ಜನರು ಹುಮ್ಮಸ್ಸಿನಿಂದಲೇ ಮತಚಲಾವಣೆ ಮಾಡುತ್ತಿದ್ದಾರೆ. ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತ ಮಾಡುತ್ತಿರುವ ರಾಜಕೀಯ ನಾಯಕರು, ಸ್ಟಾರ್ ನಟ-ನಟಿಯರು ತಮ್ಮ ಮತವನ್ನು ಚಲಾಯಿಸಿದ್ದಾರೆ. ಜತೆಗೆ ರಾಜ್ಯದ ಜನತೆಗೆ ವಿಶೇಷ ಸಂದೇಶಗಳನ್ನು ನೀಡಿದ್ದಾರೆ.
ದೊಡ್ಡದಾಗಿ ಕರ್ನಾಟಕದ ಹಾಗೂ ದೇಶದ ಭವಿಷ್ಯ ಅನ್ನೋದಕ್ಕಿಂತ ಸರಳವಾಗಿ ಹೇಳೋಣ, ನಮ್ಮ ಭವಿಷ್ಯ ಇದು. ಎಲ್ಲರೂ ವೋಟ್ ಮಾಡಿ. ವೋಟ್ ಮಾಡದೆ ಇರುವ 30% ಎದ್ದು ಬಂದು ವೋಟ್ ಮಾಡಿದ್ರೆ, ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆ ಆಗುತ್ತದೆ.
- ನಟ ಉಪೇಂದ್ರ
ಮತ ಹಾಕೋದು ನನ್ನ ಕರ್ತವ್ಯ. ಅದನ್ನ ನಾನು ಸೂಕ್ತವಾಗಿ ನಿಭಾಯಿಸಿದ್ದೀನಿ. ನೀವು ಕೂಡ ಬಂದು ನಿಮ್ಮ ಮತದಾನದ ಹಕ್ಕನ್ನ ಚಲಾಯಿಸಿ. ಅದು ನಮ್ಮ ಮೂಲ ಕರ್ತವ್ಯವಾಗಬೇಕು. ಮತ ಚಲಾಯಿಸಿ ನಿಮ್ಮ ಕರ್ತವ್ಯವನ್ನು ನಿಭಾಯಿಸಬೇಕು.
-ನಟ ರಾಘವೇಂದ್ರ ರಾಜಕುಮಾರ್
ಇದನ್ನೂ ಓದಿ: ಮತ ಚಲಾಯಿಸಿದ ಮಾಜಿ ಸಿಎಂ; ಸ್ವಂತ ಬಲದಿಂದ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ
ಮತ ಚಲಾವಣೆ ನಮ್ಮ ಹಕ್ಕಾಗಿದ್ದು, ನಮ್ಮ ಹಕ್ಕನ್ನು ನಾವು ಚಲಾಯಿಸಬೇಕು. ಪ್ರತೀ ಸಾರಿ ವೋಟಿಂಗ್ ಪರ್ಸೆಂಟೇಜ್ ಕಡಿಮೆ ಇರುತ್ತದೆ. ಈ ಬಾರಿಯಾದರೂ ವೋಟಿಂಗ್ ರೇಟ್ ಜಾಸ್ತಿಯಾಗಲಿ. ಎಲ್ಲಾ ಯುವಕರೂ ವೋಟ್ ಮಾಡಿ. ವೋಟಿಂಗ್ ಪರ್ಸೆಂಟೇಜ್ ಯಾಕೆ ಕಡಿಮೆಯಾಗುತ್ತೆ ಅಂತ ಗೊತ್ತಾಗ್ತಿಲ್ಲ. ವಯಸ್ಸಾದವರೂ ಸಹ ಬಂದು ವೋಟ್ ಮಾಡುತ್ತಾರೆ. ಯುವಕರು ಬಂದು ವೋಟ್ ಮಾಡಬೇಕು. ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡೋದು, ಕಾಮೆಂಟ್ ಮಾಡೋದು ಸುಲಭ. ವೋಟ್ ಮಾಡಿ ಪ್ರಶ್ನೆ ಮಾಡುವ ಹಕ್ಕು ಪಡೆಯಿರಿ. ತಪ್ಪದೇ ವೋಟ್ ಮಾಡಿ.
-ನಟ ಶ್ರೀ ಮುರಳಿ
ಮತದಾನ ಮಾಡೋದು ನಮ್ಮ ಹಕ್ಕು. ಯಾರು ಮನೆಯಲ್ಲಿ ಸುಮ್ಮನೇ ಕೂರಬೇಡಿ. ತಪ್ಪದೇ ಮತದಾನ ಮಾಡಿ. ಎಲೆಕ್ಷನ್ 5 ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ಇದರಿಂದ ಪ್ರಯೋಜನ ನಮಗೆ ಆಗುತ್ತದೆ, ಬೇರೆಯವರಿಗೆ ಅಲ್ಲ. ಹಾಗಾಗಿ ತಪ್ಪಿಸದೇ ಮತದಾನ ಮಾಡಿ ಅಂತ ಹೇಳ್ತಿನಿ ಅಷ್ಟೇ.
-ನಟ ದುನಿಯಾ ವಿಜಯ್
ಮತದಾನ ಎಲ್ಲರು ಮಾಡಬೇಕು. ಈ ಬಾರಿ ಜಾಸ್ತಿ ಪ್ರಮಾಣದಲ್ಲಿ ಮತದಾನ ಆಗುತ್ತದೆ ಅಂತ ನನಗೆ ವಿಶ್ವಾಸವಿದೆ. ನಾನು ಕುಟುಂಬ ಸಮೇತ ಮತದಾನ ಮಾಡಿದ್ದೇನೆ. ಇನ್ನು ಸಾಕಷ್ಟು ಸಮಯವಿದೆ, ಯುವಕರು ಬೇಗ ಬಂದು ಮತದಾನ ಮಾಡಿ.
-ನಟ ಶರಣ್
ಇದನ್ನೂ ಓದಿ: ಸುಭದ್ರ ಕರ್ನಾಟಕಕ್ಕಾಗಿ VOTE ಮಾಡೋಣ: ಮತ ಚಲಾಯಿಸಿ ಮದುವೆ ಮಂಟಪಕ್ಕೆ ತೆರಳಿದ ವಧು
ಅಭಿವೃದ್ಧಿಗಾಗಿ, ಯುವಜನತೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಮತ ನೀಡಿ.
-ನಟಿ ಅಮೂಲ್ಯ
ಮತದಾನ ಎಲ್ಲಾರ ಜವಾಬ್ದಾರಿ, ತಪ್ಪದೇ ವೋಟ್ ಹಾಕಬೇಕು. ಇದು ನಿಮ್ಮ ಹಕ್ಕು, ನಿಮ್ಮ ಆಯ್ಕೆ ಸರಿಯಾಗಿರಲಿ. ಪುನೀತ್ ರಾಜ್ ಕುಮಾರ್ ಅವರನ್ನ ಪ್ರತಿ ದಿನ, ಪ್ರತಿ ಕ್ಷಣ ನೆನೆಯುತ್ತೇನೆ. ಈಗಲೂ ಅಪ್ಪು ನೆನಪು ಆಗುತ್ತಿದೆ.
-ನಟ ಯುವರಾಜ್ ಕುಮಾರ್
ನನಗೆ ಪಕ್ಷದ ಮೇಲೆ ಒಲವಿದೆ, ಪ್ರಚಾರಕ್ಕೆ ಹೋಗಲ್ಲ. ಜನರಿಗಾಗಿ ಕೆಲಸ ಮಾಡುವ ನಾಯಕರನ್ನು ಆಯ್ಕೆ ಮಾಡಬೇಕು. ನಾಯಕನಾದವನು ಊರಿಗೆ ಮೂಲಭೂತ ಸೌಕರ್ಯ ಒದಗಿಸಿ, ಕ್ಷೇತ್ರದ ಜನರ ಬೇಡಿಕೆ ಈಡೇರಿಸಬೇಕು. ಹಳ್ಳಿ ಭಾಗದಲ್ಲಿ ಮತದಾನ ಬಗ್ಗೆ ಜನಕ್ಕೆ ಕಾಳಜಿ ಜಾಸ್ತಿ. ನಮ್ಮ ನಾಯಕ ಯಾರಾಗಬೇಕು ಎಂದು ಜನ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡುತ್ತಾರೆ. ಯುವ ಜನರು ಯಾರನ್ನು ಆಯ್ಕೆ ಮಾಡುತ್ತಾರೋ, ಅವರು ನಮ್ಮ ದೇಶದ ಭವಿಷ್ಯ. ಚುನಾವಣಾ ಪ್ರಕ್ರಿಯೆಗೆ ಹೊಸ ಹೊಸ ಮುಖಗಳು ಬರಲೇಬೇಕು. ಹೊಸ ನಾಯಕರು ಬಂದಾಗ ಹೊಸ ಹೊಸ ನಿರೀಕ್ಷೆಗಳು ಇರುತ್ತದೆ.
-ನಟ ರಕ್ಷಿತ್ ಶೆಟ್ಟಿ
(ಏಜೆನ್ಸೀಸ್)