

ಬೆಂಗಳೂರು: ಇತ್ತೀಚೆಗೆ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಗೆ ಬೆಂಬಲ ಘೋಷಿಸಿದ್ದು, ಅದರ ಬೆನ್ನಿಗೆ ಪಕ್ಷಕ್ಕೆ ಚಿತ್ರರಂಗದಿಂದ ಮತ್ತಷ್ಟು ಸ್ಟಾರ್ ಪವರ್ ಸಿಗುವ ಲಕ್ಷಣಗಳು ಗೋಚರಿಸಿವೆ. ಇದು ಈ ಸಲದ ಚುನಾವಣೆ ಕಾವು ಇನ್ನಷ್ಟು ಹೆಚ್ಚಾಗುವಂಥ 'ಕಿಚ್ಚು' ಹೊತ್ತಿಸಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ.
ಹೌದು.. ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ ಬುಧವಾರ ಬಿಜೆಪಿಗೆ ಸೇರ್ಪಡೆ ಅಥವಾ ಬೆಂಬಲ ಘೋಷಿಸುವ ಸಾಧ್ಯತೆಗಳಿವೆ ಎಂದು ಪಕ್ಷದ ವಲಯದಿಂದ ತಿಳಿದು ಬಂದಿದೆ. ಸಚಿವ ಡಾ.ಕೆ.ಸುಧಾಕರ್, ಸಂಸದೆ ಸುಮಲತಾ ಅಂಬರೀಷ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಎರಡು ಪ್ರತ್ಯೇಕ ಸುದ್ದಿಗೋಷ್ಠಿಗಳನ್ನು ಕರೆದಿರುವುದು ಈ ವಿಚಾರದ ಕುರಿತ ಕುತೂಹಲವನ್ನು ಹೆಚ್ಚಿಸಿದೆ. ಆ ಪೈಕಿ ಒಂದು ಸುದ್ದಿಗೋಷ್ಠಿ ಇದಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತಿದ್ದು, ಚಿತ್ರರಂಗದ ಘಟಾನುಘಟಿಗಳ ಕುರಿತು ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ತೆರೆಮರೆಯಲ್ಲಿ ನಡೆದ ಈ ಪ್ರಯತ್ನದಲ್ಲಿ ಗೌಪ್ಯತೆ ಕಾಯ್ದುಕೊಳ್ಳಲಾಗಿದ್ದು, ಬಿಜೆಪಿ ಕೆಳಹಂತದ ಕಾರ್ಯಕರ್ತರಲ್ಲೂ ಕುತೂಹಲ ಮೂಡಿಸಿದೆ.