ನವವಿವಾಹಿತ ಮತ್ತವನ ಅಣ್ಣನ ಪ್ರಾಣ ತೆಗೆಯಿತು ಮದ್ವೆ ಉಡುಗೊರೆಯಾಗಿ ನೀಡಿದ್ದ ಹೋಮ್​ ಥಿಯೇಟರ್!

Home Theatre
ಸಾಂದರ್ಭಿಕ ಚಿತ್ರ
Published on

ಛತ್ತೀಸ್​ಗಢ: ಮದುವೆಯಲ್ಲಿ ವಧು-ವರರಿಗೆ ಉಡುಗೊರೆ ನೀಡಿ ಶುಭ ಹಾರೈಸುವುದು ಸಹಜ. ಆದರೆ ಇಲ್ಲೊಬ್ಬ ವರನಿಗೆ ಹಾಗೆ ಕೊಟ್ಟಿದ್ದ ಉಡುಗೊರೆಯೇ ಪ್ರಾಣಕ್ಕೆ ಮುಳುವಾಗಿದೆ. ಅರ್ಥಾತ್, ಮದುವೆಗೆ ಉಡುಗೊರೆಯಾಗಿ ಕೊಟ್ಟಿದ್ದ ಹೋಮ್​ ಥಿಯೇಟರ್​ ನವವಿವಾಹಿತ ಮಾತ್ರವಲ್ಲದೆ ಆತನ ಅಣ್ಣನ ಪ್ರಾಣವನ್ನೂ ತೆಗೆದಿದೆ. ಜತೆಗೆ ನಾಲ್ವರನ್ನು ಗಾಯಗೊಳಿಸಿದೆ.

ಛತ್ತೀಸ್​ಗಢದ ಕಬೀರ್​ಧಾಮ್​ ಜಿಲ್ಲೆಯ ಚಾಮರಿ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಹೇಮೇಂದ್ರ ಮೇರಾವಿ (22) ಮತ್ತು ಆತನ ಅಣ್ಣ ರಾಜ್​ಕುಮಾರ್ (30) ಸಾವಿಗೀಡಾದವರು. ಮಾತ್ರವಲ್ಲದೆ ಒಂದೂವರೆ ವರ್ಷದ ಮಗು ಸೇರಿದಂತೆ ಇನ್ನು ನಾಲ್ವರು ಈ ಪ್ರಕರಣದಲ್ಲಿ ಗಾಯಗೊಂಡಿದ್ದರು. ಏ. 1ರಂದು ಹೇಮೇಂದ್ರ ಮದುವೆಯಾಗಿದ್ದು, ಅಂದು ಉಡುಗೊರೆಯಾಗಿ ಸ್ವೀಕರಿಸಿದ್ದ ಹೋಮ್​ ಥಿಯೇಟರ್​ನಿಂದಾಗಿ ಈ ದುರಂತ ಸಂಭವಿಸಿದೆ. ಸ್ಫೋಟದಿಂದಾಗಿ ಹೇಮೇಂದ್ರ ಸ್ಥಳದಲ್ಲೇ ಸಾವಿಗೀಡಾದರೆ, ಗಂಭೀರ ಗಾಯಗೊಂಡಿದ್ದ ರಾಜ್​ಕುಮಾರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮದುವೆಗೆ ಬಂದಿದ್ದ ಉಡುಗೊರೆಗಳನ್ನೆಲ್ಲ ತೆರೆಯುತ್ತಿದ್ದ ಹೇಮೇಂದ್ರ ಮತ್ತು ಮನೆಯವರು ಉಡುಗೊರೆಯಾಗಿ ಬಂದಿದ್ದ ಹೋಮ್​ ಥಿಯೇಟರ್​ ಕಂಡು ಖುಷಿಯಾಗಿದ್ದರು. ಅದನ್ನು ಪ್ಲಗ್ ಮಾಡಿ ವೀಕ್ಷಿಸಲು ಆರಂಭಿಸುತ್ತಿದ್ದಂತೆ ಅದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಹೋಮ್ ಥಿಯೇಟರ್ ಇರಿಸಿದ್ದ ಕೋಣೆಯ ಗೋಡೆ ಕುಸಿದಿದ್ದ, ಛಾವಣಿಯೂ ಜಖಂಗೊಂಡಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಫೋಟಕ್ಕೆ ಕಾರಣ ಏನು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net