

ಮೈಸೂರು: ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕರುನಾಡ ಚಕ್ರವರ್ತಿ, ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ಕುಮಾರ್ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೇ ಶಿವರಾಜ್ಕುಮಾರ್ ಅಭಿನಯದ 'ಘೋಸ್ಟ್' ಸಿನಿಮಾ ಅಕ್ಟೋಬರ್ 19 ರಂದು ರಾಜ್ಯಾದ್ಯಂತ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತು. ತದನಂತರ ಚಿತ್ರವನ್ನು ಥಿಯೇಟರ್ನಲ್ಲಿ ನೋಡಲಾಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡ ಚಿತ್ರತಂಡ ಶೀಘ್ರವೇ ಜೀ5 ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಚಿತ್ರವನ್ನು ಲೈವ್ ಸ್ಟ್ರೀಮಿಂಗ್ಗೆ ಲಭ್ಯವಾಗುವಂತೆ ಮಾಡಿದೆ. ಈ ಮೂಲಕ ಸಿನಿಪ್ರಿಯರು ಇದೀಗ ಘೋಸ್ಟ್ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.
ಚಿತ್ರದ ಕೆಲಸಗಳನೆಲ್ಲಾ ಮುಗಿಸಿಕೊಂಡ ಬಳಿಕ ಮೈಸೂರಿಗೆ ಭೇಟಿ ನೀಡಿದ್ದ ಶಿವಣ್ಣ, ಇನ್ಫೋಸಿಸ್ ಸಂಸ್ಥೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆ ಮೇಲೆ ಉಪಸ್ಥಿತರಿದ್ದ ಶಿವರಾಜ್ಕುಮಾರ್, ತಮ್ಮದೇ ಚಿತ್ರದ ಸೂಪರ್ಹಿಟ್ ಹಾಡುಗಳಿಗೆ ಮನಬಿಚ್ಚಿ ಡ್ಯಾನ್ಸ್ ಮಾಡಿದ್ದಾರೆ. ಈ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಯಾವುದೇ ಸಮುದಾಯಕ್ಕೆ ಅನ್ಯಾಯವಾಗದು
'ವಿಲನ್', 'ಟಗರು' ಚಿತ್ರಗಳ ಹಾಡಿಗೆ ಕುಣಿದು ಕುಪ್ಪಳಿಸಿದ ಶಿವಣ್ಣ, ತಮಗೆ 60 ವರ್ಷ ವಯಸ್ಸಾಗಿದೆ ಎಂಬುದನ್ನು ಮರೆತು ಚಿರ ಯುವಕನಂತೆ ಡ್ಯಾನ್ಸ್ ಮಾಡಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.