

ಬೆಂಗಳೂರು: ‘ಅವತಾರ ಪುರುಷ’ ಸಿನಿಮಾ ಚಿತ್ರೀಕರಣ ವೇಳೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಟ ಶರಣ್ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದರು.
ಅಂದು ಬೆಳಗ್ಗೆ ಎಚ್ಎಂಟಿ ಗ್ರೌಂಡ್ನಲ್ಲಿ ಸಿನಿಮಾ ಶೂಟಿಂಗ್ ನಡೆಯುತಿತ್ತು. ಆ ವೇಳೆ ತೀವ್ರ ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದ ಶರಣ್ರನ್ನು ನಿರ್ದೇಶಕ ಸಿಂಪಲ್ ಸುನಿ ತಂಡ ಆಸ್ಪತ್ರೆಗೆ ಕರೆದೊಯ್ದಿತ್ತು. ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶರಣ್ ಮಾಧ್ಯಮಗಳ ಜತೆ ಮಾತನಾಡಿ ತನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ''ನಿನ್ನೆ ತಡೆಯೋಕೆ ಆಗದಷ್ಟು ಹೊಟ್ಟೆನೋವು ಕಾಣಿಸಿಕೊಂಡಿತ್ತು. ನನ್ನ ಜೀವನದಲ್ಲಿ ಇಂತಹ ನೋವು ಅನುಭವಿಸಿರಲಿಲ್ಲ. ಇದಕ್ಕೂ ಎರಡು ದಿನ ಹಿಂದೆಯೇ ಸ್ವಲ್ಪ ನೋವಿತ್ತು. ಮಸಲ್ ಕ್ಯಾಚ್ ಆಗಿರಬೇಕು ಅಂದುಕೊಂಡಿದ್ದೆ. ಶನಿವಾರ ಶೂಟಿಂಗ್ ವೇಳೆಯೇ ಅಪಾರ ನೋವಿನಿಂದ ಬಳಲುತ್ತಿದ್ದ ನನ್ನನ್ನು 'ಅವತಾರ ಪುರುಷ' ಚಿತ್ರತಂಡವೇ ಆಸ್ಪತ್ರೆ ಕರೆದುಕೊಂಡು ಬಂದಿತ್ತು'' ಎಂದರು. ಇದನ್ನೂ ಓದಿರಿ VIDEO| ಇದು ಕನ್ನಡದಲ್ಲಿ ಎಸ್‌ಪಿಬಿ ಹಾಡಿದ ಕೊನೆಯ ಹಾಡು!
''ಡಾಕ್ಟರ್ ಪರೀಕ್ಷೆ ನಡೆಸಿದ ಬಳಿಕ ನನಗೆ ಕಿಡ್ನಿಯಲ್ಲಿ ಕಲ್ಲು ಇದೆ ಎಂದು ತಿಳಿಸಿದರು. ಸದ್ಯಕ್ಕೆ ಏನೂ ತೊಂದರೆ ಇಲ್ಲ. ಎರಡು ದಿನ ರೆಸ್ಟ್ ಮಾಡೋಕೆ ಹೇಳಿದ್ದಾರೆ. ಮೂರು ದಿನಗಳ ಬಳಿಕ ಕಡಿಮೆ ಆಗದಿದ್ರೆ ಸರ್ಜರಿ ಮಾಡೋದಾಗಿ ತಿಳಿಸಿದ್ದಾರೆ'' ಎಂದು ಶರಣ್ ವಿವರಿಸಿದರು.
''ನಾನು ಹಾಸ್ಟಿಟಲ್ನಲ್ಲಿದ್ದರೂ ನನ್ನ ಮನಸ್ಸು ಮಾತ್ರ ಸಿನಿಮಾದತ್ತಲೇ ಇತ್ತು'' ಎಂದು ಇದೇ ವೇಳೆ ಹೇಳಿದರು.