'ಈಗ 2' ಚಿತ್ರಕ್ಕೆ ನಿನ್ನ ಅವಶ್ಯಕತೆ ಇಲ್ಲ ಅಂದ್ರು! ಕಡೆಗೂ ರಾಜಮೌಳಿ ಹೇಳಿದ್ದನ್ನು ಬಹಿರಂಗಪಡಿಸಿದ ನಟ ನಾನಿ

ವಿಜಯವಾಣಿ (37)
Published on

ಆಂಧ್ರಪ್ರದೇಶ: ಸಾಮಾನ್ಯವಾಗಿ ಒಂದು ಸಿನಿಮಾ ಅಂದಮೇಲೆ ಅದಕ್ಕೆ ಹೀರೋ ಪಾತ್ರ ಬಹಳ ಮುಖ್ಯ. ಚಿತ್ರದಲ್ಲಿ ವಿಲನ್​ ಅಥವಾ ನಟಿ ಮೊದಲಾರ್ಧದಲ್ಲಿ ಸಾವಿಗೀಡಾದರೆ ಉಳಿದ ಕಥೆಯನ್ನು ಕೊನೆಯವರೆಗೂ ಕೊಂಡೊಯ್ಯುವುದೇ ಸಿನಿಮಾದ ನಾಯಕ. ಆದ್ರೆ, ಸ್ಟಾರ್​ ಹೀರೋನೇ ಫಸ್ಟ್​ ಆಫ್​ನಲ್ಲಿ ಸತ್ತು ಹೋದರೆ, ಆ ಚಿತ್ರದ ಗತಿಯೇನು? ಇದನ್ನೇ ಕಥೆಯ ಜೀವಾಳವಾಗಿಟ್ಟುಕೊಂಡ ಭಾರತದ ಸ್ಟಾರ್ ನಿರ್ದೇಶಕ ರಾಜಮೌಳಿ, 2012ರಲ್ಲಿ ನಟ ಕಿಚ್ಚ ಸುದೀಪ್, ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಟಿ ಸಮಂತಾ ರುತು ಪ್ರಭು ಸೇರಿಸಿಕೊಂಡು ರೂಪಿಸಿದ ತೆಲುಗು ಚಿತ್ರವೇ 'ಈಗ'. ಈ ಸಿನಿಮಾ ಅಂದು ಬ್ಲಾಕ್​ಬಸ್ಟರ್​ ಚಿತ್ರವಾಗಿ ಹೊರಹೊಮ್ಮಿದ್ದು ನಮಗೆಲ್ಲಾ ಗೊತ್ತೇ ಇದೆ. ಕೇವಲ ಒಂದು ನೊಣವನ್ನೇ ಚಿತ್ರದ ಹೀರೋ ಆಗಿ ಮಾಡಿದ ರಾಜಮೌಳಿಗೆ ಎಲ್ಲಿಲ್ಲದ ಪ್ರಶಂಸೆ, ಮೆಚ್ಚುಗೆಗಳು ಹರಿದುಬಂದಿತ್ತು. ಇದೀಗ 'ಈಗ 2' ಯಾವಾಗ ಎಂಬ ಪ್ರಶ್ನೆ ಸದ್ಯ ಮುನ್ನೆಲೆಗೆ ಬಂದಿದೆ.

ಇದೇ ಆಗಸ್ಟ್​ 29ರಂದು ಬಿಡುಗಡೆಯಾಗಲು ಸಜ್ಜಾಗಿರುವ 'ಸರಿಪೋದಾ ಶನಿವಾರಂ' ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ನಟ ನಾನಿ, ತಮ್ಮ ನಿರ್ದೇಶಕ ವಿವೇಕ್ ಅತ್ರೇಯ ಜತೆ ಸಾಲು ಸಾಲು ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಆ ಪೈಕಿ ಇತ್ತೀಚೆಗಷ್ಟೇ ನಡೆದ ಸಂಭಾಷಣೆಯಲ್ಲಿ 'ಈಗ 2' ಬಗ್ಗೆ ನಾನಿ ಕೆಲವು ವಿಷಯಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

"ಈಗ 2ರ ಬಗ್ಗೆ ನಾನ್ಯವತ್ತು ವಿಜಯೇಂದ್ರ ಪ್ರಸಾದ್​ಗಿರಿ ಅವರನ್ನು ಕೇಳಿರಲಿಲ್ಲ. ಆದ್ರೆ, ರಾಜಮೌಳಿ ಅವರೊಂದಿಗೆ ಒಂದಷ್ಟು ತಮಾಷೆಯಲ್ಲಿ ತೊಡಗಿದ್ದೆ. ನಾವು ಚಿತ್ರಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಂಡಿದ್ದೇವೆ ಎಂದು ರಾಜಮೌಳಿ ಹೇಳಿದರು. ಅದಕ್ಕೆ ನಾನು ಯಾವಾಗ ಶುರು ಮಾಡ್ತೀರಿ? ನಾನು ಬಹಳ ಉತ್ಸುಕನಾಗಿದ್ದೀನಿ ಹೇಳಿ ಎಂದೆ. ಹೀಗೇಳುತ್ತಿದ್ದಂತೆ ಉತ್ತರಿಸಿದ ನಮ್ಮ ನಿರ್ದೇಶಕರು, ನಾವು ಈ ಚಿತ್ರ ಮಾಡಿದರೂ ಕೂಡ ನಿನ್ನ ಅವಶ್ಯಕತೆ ನಮಗಿಲ್ಲ. ಯಾಕಂದ್ರೆ ನಿನ್ನ ಪಾತ್ರವನ್ನು ಅದೊಂದು ನೊಣವೇ ಮಾಡುತ್ತದೆ ಅಲ್ವಾ?" ಎಂದರು.

"ಎರಡನೇ ಭಾಗದಲ್ಲಿಯೂ ಸಹ ಅದೇ ನಿನ್ನ ಜಾಗದಲ್ಲಿ ನಟಿಸುತ್ತದೆ ಅಂದಮೇಲೆ ನೀನ್ಯಾಕೆ ಎಂದು ನಗುತ್ತಲೇ ಹೇಳಿದರು. ಅಸಲಿಗೆ ಈಗ ಅನ್ನೋ ಒಂದು ಐಡಿಯಾನೇ ಸಖತ್ ಆಗಿದೆ. ಒಂದು ನೊಣದ ಮೂಲಕ ಸಿನಿಮಾ ತೆಗೆದು, ಹಿಟ್ ಮಾಡಿದ ರಾಜಮೌಳಿ ಅವರಿಗೆ ನಿಜಕ್ಕೂ ಒಂದು ದೊಡ್ಡ ಮೆಚ್ಚುಗೆ ಕೊಡಬೇಕು. 'ಈಗ 2' ಸಿನಿಮಾ ಬಗ್ಗೆ ರಾಜಮೌಳಿ ಯಾವಾಗ ತಲೆಕೆಡಿಸಿಕೊಳ್ಳುತ್ತಾರೆ ಎಂಬ ಕುತೂಗಲ ನೋಡುಗರಿಗಿಂತ ನನಗೆ ಹೆಚ್ಚಿದೆ. ಇದೇನಾದರೂ ರಿಲೀಸ್ ಆದರೆ ಖಂಡಿತ ಮತ್ತೊಂದು ಅದ್ಭುತ ಹಾಗೂ ಬ್ಲಾಕ್​ಬಸ್ಟರ್ ಚಿತ್ರವಾಗುವುದರಲ್ಲಿ ಅನುಮಾನೇ ಇಲ್ಲ" ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net