

ಕೇರಳ: ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಮಾಲಿವುಡ್ನ ಘನತೆ, ಗೌರವಕ್ಕೆ ಕಪ್ಪುಚುಕ್ಕೆ ತಂದ ಬೆನ್ನಲ್ಲೇ ಇದೀಗ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಮೋಹನ್ ಲಾಲ್ ರಾಜೀನಾಮೆ ಘೋಷಿಸಿದ್ದಾರೆ. ನಟನ ಬೆನ್ನಲ್ಲೇ ಸಮಿತಿಯ ಸದಸ್ಯರೆಲ್ಲರೂ ಒಟ್ಟಾಗಿ ರಾಜೀನಾಮೆ ಸಲ್ಲಿಸಿದ್ದು, ಕಮಿಟಿಯನ್ನು ವಿಸರ್ಜಿಸಿದ್ದಾರೆ.
ಇಂದು ತಮ್ಮ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ ಘೋಷಿಸುತ್ತಿದ್ದಂತೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಕಮಿಟಿಯ ವಿಸರ್ಜನೆಗೆ ಕಾರಣರಾಗಿದ್ದಾರೆ. ಹೇಮಾ ಕಮಿಟಿ ವರದಿ ಬಳಿಕ ಸಾಲು ಸಾಲು ನಟಿಮಣಿಯರು ತಮಗಾದ ಲೈಂಗಿಕ ಕಿರುಕುಳದ ಅನುಭವವನ್ನು ಬಹಿರಂಗವಾಗಿ ಹಂಚಿಕೊಂಡರು. ಯಾರಿಂದ, ಯಾವಾಗ ನಮಗೆ ಇಂತಹ ಕೆಟ್ಟ ಪರಿಸ್ಥಿತಿ ಎದುರಾಗಿತ್ತು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸರಣಿ ಆರೋಪಗಳ ಹಿನ್ನಲೆ ನಟ ಸಿದ್ದಿಕ್ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿದು ಭಾರೀ ಟೀಕೆಗಳಿಗೆ ಗುರಿಯಾಗಿದ್ದಾರೆ.
ಅಸೋಸಿಯೇಷನ್ ಬಿಡುಗಡೆಗೊಳಿಸಿದ ಹೇಳಿಕೆಯ ಪ್ರಕಾರ, ನಮ್ಮ ಸಮಿತಿಯ ಕೆಲವು ಸದಸ್ಯರು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸಿದ ನಂತರ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗಿದೆ. ಆ ವಿಷಯಗಳು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿವೆ. ನೈತಿಕ ಹೊಣೆಗಾರಿಕೆಯನ್ನು ಹೊತ್ತುಕೊಂಡು ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲು AMMA ನಿರ್ಧರಿಸಿದೆ. ಎರಡು ತಿಂಗಳೊಳಗೆ ಚುನಾವಣೆಯ ನಂತರ ಹೊಸ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಲಾಗಿದೆ.
"ಸಂಘವನ್ನು ಪುನರುಜ್ಜೀವನಗೊಳಿಸುವ ಮತ್ತು ಬಲಪಡಿಸುವ ಸಾಮರ್ಥ್ಯವಿರುವ ನಾಯಕತ್ವವು ಶೀಘ್ರದಲ್ಲೇ ಅಧಿಕಾರ ವಹಿಸಿಕೊಳ್ಳಲಿದೆ ಎಂದು ನಾವು ಭಾವಿಸುತ್ತೇವೆ. ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ನಟರಾದ ಜಗದೀಶ್, ಜಯನ್ ಚೇರ್ತಲ, ಬಾಬುರಾಜ್, ಕಲಾಭವನ್ ಶಾಜೋನ್, ಸೂರಜ್ ವೆಂಜರಮೂಡು, ಜಾಯ್ ಮ್ಯಾಥ್ಯೂ, ಸುರೇಶ್ ಕೃಷ್ಣ, ಟಿನಿ ಟಾಮ್, ಅನನ್ಯಾ, ವಿನು ಮೋಹನ್, ಟೊವಿನೋ ಥಾಮಸ್, ಸರಯು, ಅನ್ಸಿಬಾ ಮತ್ತು ಜೋಮೋಲ್ ವಿಸರ್ಜನೆಗೊಂಡ ಕಾರ್ಯಕಾರಿ ಸಮಿತಿಯ ಭಾಗವಾಗಿದ್ದರು,(ಏಜೆನ್ಸೀಸ್).